ಕರ್ನಾಟಕ

ಸೋಮವಾರಪೇಟೆ ಎಸ್ ಬಿಐ ಬ್ಯಾಂಕ್ ಗೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ,ಮಾ.13-ಪಟ್ಟಣದಲ್ಲಿ ಎಟಿಎಂ ಹಾಗೂ ಬ್ಯಾಂಕ್‍ಗಳಲ್ಲಿ ಹಣ ದೊರಕದೆ, ಗ್ರಾಹಕರು ಪರದಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಇಲ್ಲಿನ ಎಸ್‍ಬಿಐ ಬ್ಯಾಂಕ್‍ಗೆ ಮಂಗಳವಾರ ಭೇಟಿ ನೀಡಿದರು.

ಈ ಸಂದರ್ಭ ಶಾಸಕರಿಗೆ ಕನಿಷ್ಟ ಸೌಜನ್ಯಕ್ಕೂ ಕೂರಲು ಹೇಳದೆ, ಬ್ಯಾಂಕ್ ವ್ಯವಸ್ಥಾಪಕರು ತೀರಾ ಉಡಾಫೆಯಿಂದ ವರ್ತಿಸಿದ ಘಟನೆ ನಡೆಯಿತು. ಶಾಸಕರು ಈ ಸಂದರ್ಭ ಬ್ಯಾಂಕ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕರೆನ್ಸಿ ಚೆಸ್ಟ್ ಬ್ಯಾಂಕ್ ಆಗಿದ್ದರೂ ಕಳೆದ 1 ತಿಂಗಳಿನಿಂದ ಎಲ್ಲ ಬ್ಯಾಂಕ್‍ಗಳಿಗೆ ಎಸ್‍ಬಿಐ ಸಮರ್ಪಕವಾಗಿ ಹಣ ವಿತರಿಸಲು ವಿಫಲವಾಗಿದೆ. ಸಕಾಲದಲ್ಲಿ ಹಣ ದೊರೆಯದೆ, ಗ್ರಾಹಕರು ಪರದಾಡುತ್ತಿದ್ದಾರೆ. ಬೇರಾವುದೇ ಸ್ಥಳಗಳಲ್ಲಿ ಈ ಸಮಸ್ಯೆ ಇಲ್ಲದಿದ್ದರೂ, ಸೋಮವಾರಪೇಟೆಯಲ್ಲಿ ನಿರಂತರವಾಗಿ ಮುಂದುವರೆದಿದೆ.

ಶಾಸಕ ರಂಜನ್ ಎಸ್‍ಬಿಐ ಬ್ಯಾಂಕ್‍ಗೆ ಭೇಟಿ ನೀಡಿದ ಸಂದರ್ಭ ವ್ಯವಸ್ಥಾಪಕರ ಬಳಿ ತಮ್ಮ ಪರಿಚಯ ಮಾಡಿಕೊಂಡರೂ, ಗೌರವ ತೋರಿಸಲಿಲ್ಲ. ವ್ಯವಸ್ಥಾಪಕರ ಕೊಠಡಿಯಲ್ಲಿರುವ ಕುರ್ಚಿಗಳಲ್ಲಿ ಬ್ಯಾಂಕ್ ದಾಖಲೆಗಳನ್ನು ಸಂಗ್ರಹಿಸಿಡಲಾಗಿತ್ತು. ಶಾಸಕರೊಂದಿಗೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರಿಗೂ ಸಹ ಗೌರವ ನೀಡಲಿಲ್ಲ. ಜನಪ್ರತಿನಿಧಿಗಳಿಗೆ ಕನಿಷ್ಠ ಗೌರವ ತೋರದ ಬ್ಯಾಂಕ್ ಅಧಿಕಾರಿಗಳೂ ಗ್ರಾಹಕರೊಂದಿಗೆ ವ್ಯವಹರಿಸಲು ಹೇಗೆ ಸಾಧ್ಯ ಎಂದು ಶಾಸಕರು ಪ್ರಶ್ನಿಸಿದರು.

ಈ ಸಂದರ್ಭ ಬ್ಯಾಂಕ್‍ನಲ್ಲಿದ್ದ ಗ್ರಾಹಕರು, ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಆರೋಪ ಹೊರಿಸಿದರು. ಗ್ರಾಹಕರನ್ನು ನಿಕೃಷ್ಠರಂತೆ ಕಾಣುತ್ತಿದ್ದಾರೆ. ಇದರಿಂದಾಗಿ ಕೆಲವು ಗ್ರಾಹಕರು ತಮ್ಮ ಖಾತೆಗಳನ್ನು ಮುಂದುವರೆಸುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕರು, ನಾವೀಗಾಗಲೇ ರಿಸರ್ವ್ ಬ್ಯಾಂಕ್‍ಗೆ ಹಣವನ್ನು ಕೋರಿ ಪತ್ರ ಬರೆದಿದ್ದೇವೆ. ಆದರೆ, ನಮ್ಮ ಶಾಖೆಗೆ ಹಣ ಬಂದಿಲ್ಲ ಎಂದು ತಿಳಿಸಿದರು.  ಪಟ್ಟಣದಲ್ಲಿ ವಿಜಯ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್‍ಗಳು ಮಾತ್ರ ಬೇರೆಡೆಗಳಿಂದ ಹಣ ತಂದು ಎಟಿಎಂಗೆ ತುಂಬುತ್ತಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿತಿಸುತ್ತಿತ್ತು ಎಂದು ಗ್ರಾಹಕರೊಬ್ಬರು ಹೇಳಿದರು. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಕೇಂದ್ರ ಹಣಕಾಸು ಸಚಿವರಿಗೆ ದೂರು ನೀಡಲಾಗುವುದು ಎಂದು ಶಾಸಕರು ಹೇಳಿದರು.

ಈ ಸಂದರ್ಭ ತಾಪಂ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಮಾ ಸುದೀಪ್ ಹಾಗೂ ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮನುಕುಮಾರ್ ರೈ ಉಪಸ್ಥಿತರಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: