ಕರ್ನಾಟಕ

ಶ್ರೀ ಮುತ್ತಪ್ಪಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ

ಸೋಮವಾರಪೇಟೆ,ಮಾ.13-ಕಳೆದ ಎರಡು ದಿನಗಳಿಂದ ನಡೆದ ವಿಜೃಂಭಣೆಯ ಶ್ರೀ ಮುತ್ತಪ್ಪಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತೆರೆ ಕಂಡಿತು.

ಸೋಮವಾರ ಸಂಜೆ ದೈವಗಳ ವೆಳ್ಳಾಟಂ ಹಾಗೂ ಕೋಲಗಳಿಗೆ ಚಾಲನೆ ನೀಡಲಾಯಿತು. ಸಂಜೆ ದೇವಾಲಯದಿಂದ ಹೊರಟ ಮುತ್ತಪ್ಪ ದೈವದ ಮೊದಲ್ ಕಳಸದೊಂದಿಗೆ ಮುತ್ತಪ್ಪ-ತಿರುವಪ್ಪ ದೈವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಕೇರಳದ ಪ್ರಖ್ಯಾತ ಸಿಂಗಾರಿ ಮೇಳದ ನೃತ್ಯ ನೋಡುಗರನ್ನು ಆಕರ್ಷಿಸಿತು.

ಕೇರಳ ಮೂಲದ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತವು, ಕಂಡಕರ್ಣ ದೈವದ, ಭಗವತಿ ದೇವಿ, ರಕ್ತಚಾಮುಂಡಿ, ಪೊಟ್ಟನ್ ದೈವದ ವೆಳ್ಳಾಟಂ ಹಾಗು ಕೋಲಗಳು ನಡೆದವು. ಮಧ್ಯರಾತ್ರಿ ದೇವರ ಕಳಿಕ್ಕಾಪಾಟ್ ನಡೆಯಿತು.

ನಂಬಿದವರಿಗೆ ಇಂಬು ಕೊಡುವ ದೈವ ಎಂಬ ನಂಬಿಕೆಯಿಂದ ಭಕ್ತ ಕುಟುಂಬಗಳು ದೈವಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದರು. ಕಳೆದ ವರ್ಷ ತಾವು ಮಾಡಿಕೊಂಡ ಹರಕೆಯನ್ನು ತೀರಿಸಿದರು.

ಜಾತ್ರೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತಾಗಳಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಪಟಾಕಿ, ಸಿಡಿಮದ್ದಿನ ಪ್ರದರ್ಶನ ಜಾತ್ರೋತ್ಸವದ ಆಕರ್ಷಣೀಯವಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು.

ಮಂಗಳವಾರ ಬೆಳಿಗ್ಗಿನ ಜಾವ ಪೊಟ್ಟನ್ ದೈವ ಅಗ್ನಿಕೊಂಡಕ್ಕೇರುವ ಧಾರ್ಮಿಕ ಆಚರಣೆ ನಡೆಯಿತು. ವಿಷ್ಣುಮೂರ್ತಿ, ಕಂಡಕರ್ಣ, ಗುಳಿಗನ್ ದೈವಕ್ಕೆ ಗುರುಶ್ರೀ ದರ್ಪಣ ನಡೆಯುವುದರೊಂದಿಗೆ ಮಂಗಳವಾರ ಸಂಜೆ ವಿದ್ಯುಕ್ತ ತೆರೆ ಕಂಡಿತು. ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಕಾರ್ಯನಿರ್ವಹಿಸಿದರು. (ವರದಿ-ಕೆಸಿಐ, ಎಂ.ಎನ್)

 

Leave a Reply

comments

Related Articles

error: