ಕರ್ನಾಟಕ

ರಾಜ್ಯ ಸರ್ಕಾರ ಕಾಫಿ ಬೆಳಗಾರರ, ರೈತರ ಸಾಲಮನ್ನಾ ಮಾಡಬೇಕು: ಅಪ್ಪಚ್ಚು ರಂಜನ್

ಸೋಮವಾರಪೇಟೆ,ಮಾ.13-ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಸಾಲಮನ್ನಾ ಮಾಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ಕಾಫಿ ಹಾಗೂ ಕಾಳುಮೆಣಸಿನ ಬೆಲೆ ಕುಸಿದಿದ್ದು, ಹವಾಮಾನ ವೈಪರಿತ್ಯದಿಂದ ಫಸಲು ನಷ್ಟ ಅನುಭವಿಸಿದ್ದಾರೆ. ಈ ಕಾರಣದಿಂದ ರಾಷ್ಟ್ರೀಕೃತ ಹಾಗು ಸಹಕಾರ ಸಂಘಗಳಲ್ಲಿನ ಸಾಲವನ್ನು ಮನ್ನಾ ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬಹುದಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಒತ್ತಡ ಹೇರಲಾಗುವುದು. ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲಿ ರಾಜ್ಯ ಸರ್ಕಾರವೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿಕರ ಸಾಲಮನ್ನಾ ಮಾಡಿದ ಉದಾಹರಣೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತಪರ ಸರ್ಕಾರ ಎಂದು ಪ್ರಚಾರ ತೆಗೆದುಕೊಳ್ಳುತ್ತಿರುವುದರಿಂದ ಸಾಲಮನ್ನಾ ಮನ್ನಾ ಮಾಡಿ ರೈತಪರ ಕಾಳಜಿ ತೋರಿಸಲಿ ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ರೈತರ ಸಾಲ ವಸೂಲಾತಿಗೆ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ. ರೈತರು ಸಂಕಷ್ಟದಲ್ಲಿರುವುದರಿಂದ, ಬಡ್ಡಿ ಹಣವನ್ನು ಕಟ್ಟಿಸಿಕೊಂಡು ಸಾಲ ನವೀಕರಣ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜಿಲ್ಲೆಯಲ್ಲಿ 13 ಸಾವಿರ ಬಿಪಿಎಲ್ ಕಾರ್ಡ್‍ಗಳು ರದ್ದುಗೊಂಡಿವೆ. ಕೆಲ ವೃದ್ಧರ ಮಾಸಾಸನ ನಿಂತುಹೋಗಿದೆ. ಇದರಿಂದ ಬಡ ಜನರಿಗೆ ತೊಂದರೆಯಾಗಿದೆ. ಕೂಡಲೇ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ.ಅಭಿಮನ್ಯು ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಬಿಜೆಪಿ ರಾಜ್ಯ ಮಹಿಳಾ ಘಟಕದ ಸದಸ್ಯೆ ಸುಮಾ ಸುದೀಪ್, ಪಕ್ಷದ ಮಡಿಕೇರಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಮನುಕುಮಾರ್ ರೈ ಮತ್ತಿತರರು ಇದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: