ಕರ್ನಾಟಕದೇಶ

ನನ್ನ ಕಾರು ಚಾಲಕನಿಗೆ ಬೆದರಿಕೆ: ಮಂಗಳೂರಿನಲ್ಲಿ ಪ್ರಕಾಶ್ ರೈ ಆರೋಪ

ಮಂಗಳೂರು (ಮಾ.14): ಮಂಗಳೂರು ವಿಮಾನ ನಿಲ್ದಾಣದಲ್ಲಿ ನನ್ನ ಕಾರು ಚಾಲಕನಿಗೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯಾರೋ ನಾಲ್ಕು ಜನ ಬಂದು ನನ್ನ ಕಾರು ಚಾಲಕನ ಬಳಿ ನನ್ನ ಬಗ್ಗೆ ಪ್ರಶ್ನಿಸಿದ್ದಾರೆ, ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂಬದನ್ನು ತಿಳಿಸುವಂತೆ ಪ್ರಶ್ನಿಸಿದ್ದಾರೆ. ಪೊಲೀಸರು ಬಂದ ಕೂಡಲೇ ಸ್ಥಳದಿಂದ ಪೇರಿ ಕಿತ್ತಿದ್ದಾರೆ. ಈ ಮೂಲಕ ಅನಾಮಿಕರು ನನಗೆ ಹೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಬಲಪಂಥೀಯರ ವಿರುದ್ಧ #ಜಸ್ಟ್ಆಸ್ಕಿಂಗ್ ಅಭಿಯಾನ ನಡೆಸುತ್ತಿರುವ ಚಿತ್ರನಟ ಪ್ರಕಾಶ್ ರೈ ಅವರು, ನನಗೆ ಇಲ್ಲಿ ಆತಂಕದ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿಯ ಹೆದರಿಕೆಗಳಿಗೆ ಬಗ್ಗುವುದಿಲ್ಲ. ಜಸ್ಟ್ ಆಸ್ಕಿಂಗ್ ಅಭಿಯಾನ ಮುಂದುವರೆಯಲಿದೆ ಎಂದರು.

ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ. ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ. ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಇಂದಿನ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ, ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪಬ್ ದಾಳಿಯ ಆರೋಪಿಗಳಿಗೆ ನ್ಯಾಯಾಲಯ ಖುಲಾಸೆ ನೀಡಿದೆ. ದಾಳಿ ಮಾಡಿರುವ ವಿಡಿಯೋ ಇರುವಾಗ ನ್ಯಾಯಾಲಯ ಏಕೆ ಈ ರೀತಿ ತೀರ್ಪು ಕೊಟ್ಟಿದೆ ಎಂಬುದು ತಿಳಿಯುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪಬ್ ದಾಳಿಯ ಆರೋಪಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಕಾಂಗ್ರೆಸ್ ಕೂಡ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ರೈ ಆಗ್ರಹಿಸಿದರು. (ಎನ್.ಬಿ)

Leave a Reply

comments

Related Articles

error: