
ಮೈಸೂರು
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ,ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಮಾ.15:- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ,ರೈತ ವಿರೋಧಿ,ಜನವಿರೋಧಿ ನೀತಿಗಳು ಕಾರ್ಪೋರೇಟ್ ಪರ ನೀತಿಗಳ ವಿರುದ್ಧ ಹಾಗೂ ರಕ್ಷಣಾ ವಲಯದ ಉತ್ಪಾದನಾ ಘಟಕಗಳ ಕಾರ್ಮಿಕರ ದೇಶವ್ಯಾಪಿ ಹೋರಾಟವನ್ನು ಬೆಂಬಲಿಸಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಸರ್ಕಾರದ ಜನ ವಿರೋಧಿ,ರೈತ ವಿರೋಧಿ,ಕಾರ್ಮಿಕ ವಿರೋಧಿ ಕಾರ್ಪೋರೇಟ್ ಪರ ನೀತಿಗಳಿಂದಾಗಿ ಜನರ ಬದುಕು ಕಷ್ಟಕರವಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಖಾಸಗಿ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಬದುಕು ದುಸ್ತರವಾಗಿದೆ. ಜಿಎಸ್ ಟಿ, ಆರ್ಥಿಕ ಭಯೋತ್ಪಾದನೆಯಂತಹ ಕ್ರಮಗಳಿಂದ ದೇಶದ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೇ ಬೀದಿಪಾಲಾಗುತ್ತಿದ್ದಾರೆ. ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ. ರೈತರ ಸಾಲಮನ್ನಾ ಮಾಡದ ಕೇಂದ್ರ ಸರ್ಕಾರ ಕಾರ್ಪೋರೇಟ್ ವಂಚಕರ 2ಲಕ್ಷ ಕೋ.ರೂ.ಸಾಲಮನ್ನಾ ಮಾಡಿ ಬ್ಯಾಂಕ್ ಗಳ ದಿವಾಳಿಗೆ ಕಾರಣವಾಗುತ್ತಿದೆ. ಅಲ್ಲದೇ ಎಫ್ ಆರ್ ಡಿಐನಂತಹ ಕಾನೂನು ಜಾರಿಗೆ ತರುವ ಮೂಲಕ ಠೇವಣಿದಾರರು ಹಾಗೂ ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕಲು ಹೊರಟಿದೆ ಎಂದು ಆರೋಪಿಸಿದರು. ಕಾರ್ಮಿಕರ ಕಾನೂನುಗಳಿಗೆ ಬಂಡವಾಳಗಾರರ ಪರವಾಗಿ ಮಾಡ ಬಯಸುವ ತಿದ್ದುಪಡಿ ಕೈಬಿಡಬೇಕು. 18000ಸಮಾನ ಕನಿಷ್ಟವೇತನ ಜಾರಿಗೊಳಿಸಬೇಕು. 3000ಕನಿಷ್ಟ ಪಿಂಚಣಿ ಜಾರಿಯಾಗಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಂಟಿ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)