ಮೈಸೂರು

ಅನುದಾನದಲ್ಲಿ ತಾರತಮ್ಯ ಮಾಡದೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ : ಜಿ.ಪಂ. ಸಭೆಯಲ್ಲಿ ಸಂಸದರ ಸಲಹೆ

ಮೈಸೂರು ಜಿಲ್ಲೆಯಲ್ಲಿನ ವಿವಿಧ ಕಾಮಗಾರಿಗಳಿಗೆ ಕೆಲ ತಾಲೂಕುಗಳಲ್ಲಿ ಕಡಿಮೆ, ಕೆಲವು ತಾಲೂಕುಗಳಿಗೆ ಹೆಚ್ಚು ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಸಾ.ರಾ.ಮಹೇಶ್ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ   ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ವಿವಿಧ ತಾಲೂಕುಗಳಿಗೆ ಬಿಡುಗಡೆಯಾದ ಹಣದ ವಿವರವನ್ನು ನೀಡಿದಾಗ ಈ ಆಕ್ಷೇಪ ಕೇಳಿ ಬಂತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಧೃವನಾರಾಯಣ ಮಾತನಾಡಿ ಯಾವ ತಾಲೂಕಿಗೂ ತಾರತಮ್ಯ ಮಾಡದೇ ಸಮಾನವಾಗಿ ಅನುದಾನವನ್ನು ಬಳಸಿಕೊಂಡು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಕೇಂದ್ರೀಯ ರಸ್ತೆ ಅಭಿವೃದ್ಧಿ ನಿಧಿ  ಯೋಜನೆಯಡಿ ರಾಜ್ಯಕ್ಕೆ 3579 ಕೋಟಿ ರೂ. ಅನುದಾನ ಲಭ್ಯವಾಗಿದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಗೆ 100 ಕೋಟಿ ರೂ. ಹಾಗೂ ಮೈಸೂರು ಜಿಲ್ಲೆಗೆ 288 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು  ಈ ಸಂದರ್ಭ ಅವರು ಸಭೆಗೆ ತಿಳಿಸಿದರು.

ಸಂಸದ ಪ್ರತಾಪ್ ಸಿಂಹ 500 ಹಾಗೂ 1000ರೂ.ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳ ಬಳಿ ವಿಚಾರಿಸಲಾಗಿ ಆರಂಭದ ದಿನಗಳಲ್ಲಿ ಸ್ವಲ್ಪ ಕಷ್ಟವಿತ್ತು. ಈಗ ಕ್ಯೂ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ 5ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯ ಎಲ್ಲ ಗ್ರಾಮಗಳಿಗೆ ಕನಿಷ್ಠ ಒಂದು ಬ್ಯಾಂಕ್ ಶಾಖೆ ಇರಬೇಕು ಎಂದು ತಿಳಿಸಿದರು. ಸಂಸದರ ಆದರ್ಶ ಗ್ರಾಮವಾದ ಹುಣಸೂರು ತಾಲೂಕಿನ ಕರೀಮುದ್ದನಹಳ್ಳಿಯಲ್ಲಿ ವಿಜಯಬ್ಯಾಂಕ್ ಶಾಖೆ ಆರಂಭವಾಗಿದ್ದು, ಎಟಿಎಂ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು  ಇದೇ ಸಂದರ್ಭ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಲಿಂಗಯ್ಯ  ತಿಳಿಸಿದರು.

ಸಭೆಯಲ್ಲಿ ಬೇಸಿಗೆಯ ಕುಡಿಯುವ ನೀರಿನ ಬಗ್ಗೆಯೂ ಚರ್ಚಿಸಲಾಯಿತು. ಕೆಲವು ಕಡೆ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗ ಕಳಪೆ ಕಾಮಗಾರಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಧೃವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.

ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 55 ಸಾವಿರ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು,ಇಲ್ಲಿಯವರೆಗೆ 43874 ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. 17419 ವೈಯಕ್ತಿಕ ಶೌಚಾಲಯಗಳು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು  ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮೀಣಾಭಿವೃದ್ಧಿ ಯೋಜನೆಗಳ ಆರ್ಥಿಕ ಪ್ರಗತಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಗತಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ್, ಶಾಸಕರಾದ ಎಸ್.ಚಿಕ್ಕಮಾದು, ಸಾ.ರಾ. ಮಹೇಶ್, ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: