
ಮೈಸೂರು
ಸಾಹಿತ್ಯ ಓದುವುದರಿಂದ ಜ್ಞಾನದ ಪರಿಧಿ ವಿಸ್ತರಿಸುತ್ತದೆ: ಸುಧೀಂದ್ರನಾಥ
ಓದುವ ಅಭಿರುಚಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಸಾಹಿತ್ಯವನ್ನು ಓದುವುದರಿಂದ ಜ್ಞಾನದ ಪರಿಧಿ ವಿಸ್ತರಿಸುತ್ತದೆ ಎಂದು ಪ್ರಭಾರ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಸುಧೀಂದ್ರನಾಥ್ ತಿಳಿಸಿದರು.
ಮೈಸೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮೈಸೂರು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಸುಧೀಂದ್ರನಾಥ ಮಾತನಾಡಿದರು.
ಸಾಹಿತ್ಯ ಓದುವ ಅಭಿರುಚಿ ಬೆಳೆದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ಗ್ರೀಕ್ ನಾಟಕಗಳಲ್ಲಿ ಕನ್ನಡ ಪದ ಬಳಕೆಯಾಗಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಕದಂಬರು ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಭಾಷೆ ಬೆಳೆದಿದೆ ಕನ್ನಡದ ಕುರಿತು ಹೆಮ್ಮೆ ಪಡುವುದು ಅತಿಶಯೋಕ್ತಿಯಲ್ಲ. ಕನ್ನಡಿಗರನ್ನು ಪುಸ್ತಕದತ್ತ ಕರೆತರುವ ನಿಟ್ಟಿನಲ್ಲಿ ಸಾಹಿತಿಗಳು ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನೂತನ ನ್ಯಾಯಾಧೀಶರಾಗಿ ನೇಮಕಗೊಂಡ ನಳಿನಾ, ಪ್ರೀತಿ ಮಳವಳ್ಳಿ, ಗಗನ್ ಹಾಗೂ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರೊ.ಸಿ.ನಾಗಣ್ಣ, ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಪ್ರಭು ಮತ್ತಿತರರು ಉಪಸ್ಥಿತರಿದ್ದರು.