
ಮೈಸೂರು
ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ಜಾರಿಗೆ ಒತ್ತಾಯ
ಮೈಸೂರು, ಮಾ.16 : ಸ್ಲಂ ನಿವಾಸಿಗಳಿಗಾಗಿ ಇರುವ ವಸತಿ ಹಾಗೂ ನಿವೇಶನ ಹಕ್ಕನ್ನು ಖಾತರಿ ಪಡಿಸುವ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟ ಹಾಗೂ ಧ್ವನಿ ಮಹಿಳಾ ಒಕ್ಕೂಟ ಜಂಟಿಯಾಗಿ ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸಿ.ಆರ್. ರಾಚಯ್ಯ, ಸ್ಲಂ ನಿವಾಸಿಗಳ ಅಭಿವೃದ್ಧಿ ಹಾಗೂ ವಸತಿ ನಿರ್ಮಾನಕ್ಕೆ 1973 ರಲ್ಲಿ ಸ್ಲಂ ಕಾಯ್ದೆ ಮತ್ತು ಅದರ ಅನುಷ್ಠಾನಕ್ಕೆ ಸ್ಲಂ ಬೋರ್ಡ್ ಅಸ್ತಿತ್ವಕ್ಕೆ ತಂದರೂ ಅದು ಕೇವಲ ಜನರಿಗೆ ಮನೆ ನಿರ್ಮಿಸಿಕೊಡುವ ಕೆಲಸ ಮಾಡುತ್ತಿದೆಯೇ ಹೊರತು, ಅವರ ಘನತೆಯುಕ್ತ ಜೀವನ ಕಟ್ಟಿಕೊಳ್ಳಲು ಪೂರಕವಾದ ಕೆಲಸ ಮಾಡುತ್ತಿಲ್ಲವೆಂದು ಆರೋಪಿಸಿದರು.
ಈ ಬೋರ್ಡ್ ಈ ಜನರ ಸಮಗ್ರ ಅಭಿವೃದ್ಧಿಗೆ ಬೇಕಾದ ವಸತಿ, ಆರೋಗ್ಯ ಸೇವೆ, ಭೂಮಿ ಹಕ್ಕು ಮೊದಲಾದವನ್ನು ಒದಗಿಸದ ಕಾರಣ ಈ ನಿಟ್ಟಿನಲ್ಲಿ ಹೊಸ ಕಾಯ್ದೆಗೆ ಸಂಬಂಧಿಸಿದಂತೆ ಕರಡು ರೂಪಿಸಿದ್ದು, ರಾಜ್ಯ ಸರ್ಕಾರ ಅದನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಸ್ಲಂಗಳಲ್ಲಿ ವಿವಿಧ ಯೋಜನೆ ಅಡಿಯಲಿ ನಿರ್ಮಿಸುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮನೆಗಳಿಗೆ ಏಕಕಾಲಕ್ಕೆ ಅನುದಾನ ಬಿಡುಗಡೆಗೊಳಿಸಬೇಕು. ಈ ರೀತಿ ಈಗ ನಿರ್ಮಿಸುತ್ತಿರುವ ಮನೆಗಳಿಗೆ ರಾಜ್ಯ ಸರ್ಕಾರದ ಅನುದಾನ ಬಂದರೂ ಕೇಂದ್ರದ ಅನುದಾನ ಇನ್ನೂ ಬಿಡುಗಡೆಯಾಗದ ಕಾರಣ ಈ ಮನೆಗಳು ಅಪೂರ್ಣವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕೆಂದು ಕೋರಿದರು.
ಇನ್ನು ಸ್ಲಂಗಳಲ್ಲಿ ವಿವಿಧ ಯೋಜನೆ ಅಡಿ ನಿರ್ಮಿಸು ಮನೆಗಳಿಗೆ ನಿವೇಶನ ಮತ್ತು ಮನೆ ಮುಂಭಾಗದ ಖಾಲಿ ನಿವೇಶನಗಳಿಗೆ ಹಕ್ಕುಪತ್ರ, ಜೊತೆಗೆ ಕ್ರಯಪತ್ರ ಮಾಡಿಕೊಡಬೇಕು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಲಂ ಜನರ ಮನೆಗಳ ಮೇಲಿದ್ದ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದರೂ ಇದುವರೆಗೂ ಇವರಿಗೆ ಸಾಲ ಮನ್ನಾ ಪತ್ರ ದೊರಕದ ಕಾರಣ ಈ ನಿವಾಸಿಗಳು ವಿವಿಧ ಪ್ರಯೋಜನ ಪಡೆಯಲು ಅಡ್ಡಿಯಾಗಿದ್ದು, ಕೂಡಲೇ ಸಾಲ ಮನ್ನಾ ಪತ್ರ ನೀಡಬೇಕು.
ಇನ್ನು ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಸ್ಲಂ ಜನರ ಒಳಿತಿಗಾಗಿ ಕೈಗೊಳ್ಳುವ ಕ್ರಮಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂಬಿವೇ ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಅಧ್ಯಕ್ಷ ಎಸ್. ಆನಂದ್, ಪದಾಧಿಕಾರಿಗಳಾದ ಕೆ.ವಿ. ಸುರೇಶ್, ನಳಿನಿ, ಶೋಭಾ, ಪರಶುರಾಮ್ ಇದ್ದರು. (ವರದಿ : ಕೆ.ಎಂ.ಆರ್)