ಮೈಸೂರು

ನಾ ನಡೆದ ಹೆಜ್ಜೆ ಗುರುತುಗಳು ಕೃತಿ ಲೋಕಾರ್ಪಣೆ

ಕಲಾವಿದ ಎಲ್. ಶಿವಲಿಂಗಪ್ಪ ಜನ್ಮದಿನಾಚರಣೆ ಪ್ರಯುಕ್ತ ಕದಂಬ ರಂಗವೇದಿಕೆ ಮೈಸೂರಿನ ಕಲಾಮಂದಿರದ ಆರ್ಟ್ ಗ್ಯಾಲರಿಯಲ್ಲಿ ಶನಿವಾರ  ಶಿವಲಿಂಗಪ್ಪ ಅವರ 70 ಕಲಾಕೃತಿಗಳ ಪ್ರದರ್ಶನ ಹಾಗೂ ‘ನಾ ನಡೆದ ಹೆಜ್ಜೆ ಗುರುತುಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಪ್ರೊ. ಎಸ್.ಸಿ.ಪಾಟೀಲ್, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು ಕಲೆಗೆ ಸಂಬಂಧಿಸಿದ ಶಿವಲಿಂಗಪ್ಪ ಅವರ ಲೇಖನಗಳನ್ನು ಸಂಪುಟಗಳಾಗಿ ಪ್ರಕಟಿಸುವ ಅಗತ್ಯವಿದೆ ಎಂದರು.

ಶಿವಲಿಂಗಪ್ಪ ಕಲೆ, ಶಿಲ್ಪಕಲೆಯೊಂದಿಗೆ ಉತ್ತಮ ಬರಹಗಾರರೆಂದು ಗುರುತಿಸಿಕೊಂಡಿದ್ದಾರೆ. ಕಲೆಗೆ ಸಂಬಂಧಿಸಿದ ಬಹಳಷ್ಟು ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಿಶ್ವವಿದ್ಯಾನಿಲಯಗಳು ಅವನ್ನೆಲ್ಲಾ ಒಟ್ಟುಗೂಡಿಸಿ ಸಂಪುಟಗಳಾಗಿ ಹೊರತಂದು ಕಲಾ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಅಧ್ಯಯನಕ್ಕೆ ನೆರವಾಗಬೇಕು ಎಂದು ಹೇಳಿದರು.

ಜಾನಪದ, ಚಿತ್ರಕಲಾ ಕ್ಷೇತ್ರಗಳಿಗೆ ಮೈಸೂರಿನ ತಿಪ್ಪೇಸ್ವಾಮಿ ಕೊಡುಗೆ ಅಪಾರ. ಅವರಂತೆಯೇ ಶಿವಲಿಂಗಪ್ಪ ವೈವಿಧ್ಯ ಕಲಾಕೃತಿಗಳನ್ನು ರಚಿಸಿದ್ದಾರೆ. ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಪ್ರಕೃತಿ ವಿಕೋಪಗಳಂತಹ ಸಮಕಾಲೀನ ಸಮಸ್ಯೆಗಳ ಕಲಾಕೃತಿಗಳನ್ನು ರಚಿಸಿ ನಾಡಿನಾದ್ಯಂತ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ, ವೇದಿಕೆ ಅಧ‍್ಯಕ್ಷ ಕದಂಬ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಲ್.ಶಿವಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.

 

Leave a Reply

comments

Related Articles

error: