ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ಪಕ್ಷದ ಅಸಲಿ ಕಥೆ ಇದು!: ಮೊಯ್ಲಿ ಟ್ವೀಟ್‍ಗೆ ಬಿಎಸ್ವೈ ವ್ಯಂಗ್ಯ

ಬೆಂಗಳೂರು (ಮಾ.16): ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಟ್ವೀಟ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದು, ಕಾಂಗ್ರೆಸ್ ಪಕ್ಷದ ಅಸಲಿ ಕಥೆಯಿದು ಎಂದು ವ್ಯಂಗ್ಯವಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹಣಬಲ ಬಳಸಲಾಗುತ್ತಿದೆ ಎಂದು ಮಾಡಿರುವ ಟ್ವೀಟ್‍ಗೆ ಪ್ರತಿಯಾಗಿ ಯಡಿಯೂರಪ್ಪ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.

ರಾಜಕೀಯದಲ್ಲಿ ಹಣಬಲ ಬಳಕೆಯಾಗುತ್ತಿರುವುದನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಿದೆ. ರಸ್ತೆ ಕಾಂಟ್ರಾಕ್ಟರ್‍ಗಳು ಮತ್ತು ಅವರ ಸಂಬಂಧಿಕರಿಗೆ ಹೆಚ್ಚು ಸಲಿಗೆ ನೀಡಿರುವುದು ಪಕ್ಷಕ್ಕೆ ಒಳ್ಳೆಯದಲ್ಲ ಎನ್ನುವ ಅರ್ಥದಲ್ಲಿ ಎಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಮೊಯ್ಲಿ, ತಮ್ಮ ಟ್ವೀಟ್ ಅನ್ನು ರಾಹುಲ್ ಗಾಂಧಿ, ಐಎನ್‍ಸಿ ಇಂಡಿಯಾ, ಐಎನ್ ಸಿ ಕರ್ನಾಟಕ ಟ್ವಿಟ್ಟರ್ ಖಾತೆಗಳಿಗೂ ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಕೊನೆಗೂ ಒಬ್ಬರು ಕರ್ನಾಟಕ ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ 10 ಪರ್ಸೆಂಟ್ ಸಿಎಂ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಪಿಡಬ್ಲ್ಯೂಡಿ ಸಚಿವರ ಜೇಬಿಗೆ ಗುತ್ತಿಗೆದಾರರು ಹಣ ಹಾಕುವುದರ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಹಿರಿಯ ಕಾಂಗ್ರೆಸ್ಸಿನ ಟ್ವೀಟ್ ನಮ್ಮ ಅಭಿಯಾನಕ್ಕೆ ಪೂರಕವಾಗಿದೆ. ಕಾಂಗ್ರೆಸ್ ಪಕ್ಷದ ಅಸಲಿ ಕಥೆಯನ್ನು ಆ ಪಕ್ಷದವರೇ ಬಿಚ್ಚಿಟ್ಟಿದ್ದಾರೆ ಎಂದು ಹೇಳಿದ್ದಾರೆ.(ಎನ್.ಬಿ)

Leave a Reply

comments

Related Articles

error: