
ಪ್ರಮುಖ ಸುದ್ದಿಮೈಸೂರು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನಮ್ಮ ಗುರಿ : ಸಂಸದ ರಾಜೇಂದ್ರ ಅಗರವಾಲ್
ಮೈಸೂರು,ಮಾ.17:- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದ್ದು, ಗುರಿ ಸಾಧನೆಗಾಗಿ ಬೇಕಾದ ಎಲ್ಲ ಕಾರ್ಯತಂತ್ರವನ್ನೂ ಬಿಜೆಪಿ ರೂಪಿಸಲಿದೆ ಎಂದು ಉತ್ತರ ಪ್ರದೇಶದ ಮೀರತ್ ಕ್ಷೇತ್ರದ ಸಂಸದ ರಾಜೇಂದ್ರ ಅಗರವಾಲ್ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ನಾಲ್ಕು ಕ್ಷೇತ್ರಗಳ ಉಸ್ತುವಾರಿಗೆ ನಿಯೋಜನೆಗೊಂಡಿದ್ದೇನೆ. ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಕಾರ್ಯನಿರ್ವಹಿಸುತ್ತೇನೆ. ನಿನ್ನೆ ಮೂರು ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ, ಇಂದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಬಿಜೆಪಿ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಶೇ. 99ರಷ್ಟು ಪಕ್ಷ ಸಂಘಟನೆ ಮಾಡಿದ್ದೇವೆ. ತ್ರಿಪುರ ಮಾದರಿ ಫಲಿತಾಂಶ ಇಲ್ಲಿಯೂ ಮರುಕಳಿಸಲಿದೆ. ವಿಕಾಸ ಮುದ್ರೆಯಿಂದ ಚುನಾವಣೆ ಎದುರಿಸುತ್ತೇವೆ. ವಿಕಾಸ್ ನಮ್ಮ ಅಜೆಂಡಾ. ಬಡವರ ವಿಕಾಸ ಆಗಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಓಟ್ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ.ದೇಶದ ಎಲ್ಲ ನಾಗರಿಕರನ್ನು ಒಂದೇ ಎಂದು ನೋಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸೋದೆ ನಮ್ಮ ಗುರಿ. ಹಾಗಂತ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಚಾಮುಂಡೇಶ್ವರಿಯಲ್ಲಿ ನಮ್ಮ ಪಕ್ಷದ ವಾಸ್ತವ ಸ್ಥಿತಿ ಗೊತ್ತಿದೆ. ಆದರೂ ನಾವು ಸಿದ್ದ ರಾಮಯ್ಯನವರನ್ನು ಸೋಲಿಸಲು ಸಿದ್ದರಾಗಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟರು. ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರ , ಕಾನೂನು ಹದಗೆಡಿಸುವುದರಲ್ಲಿ ಖ್ಯಾತಿ ಹೊಂದಿದೆ. ಮುಂದಿನ ದಿನಗಳಲ್ಲಿ ಇದರಿಂದ ರಾಜ್ಯ ಮುಕ್ತವಾಗಲಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ಬೇಕಾದ ಅಭ್ಯರ್ಥಿಯನ್ನು ಹಾಕುತ್ತೇವೆ. ಅಥವಾ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುತ್ತೇವೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ನಮ್ಮ ಗುರಿ. ಗುರಿ ಸಾಧನೆಗಾಗಿ ಬೇಕಾದ ಎಲ್ಲ ಕಾರ್ಯತಂತ್ರವನ್ನೂ ಬಿಜೆಪಿ ರೂಪಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಪ್ರಭಾಕರ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)