ಮೈಸೂರು

ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ

ಮೈಸೂರು,ಮಾ.17-ಸಂಧ್ಯಾ ಸುರಕ್ಷಾ ಟ್ರಸ್ಟ್ ಮತ್ತು ಸಿರಿ ಚಾನೆಲ್ ವತಿಯಿಂದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.

ಗಿನ್ನಿಸ್ ದಾಖಲೆಯ ನೃತ್ಯಗಾರ್ತಿ ತೇಜಸ್ವಿನಿ, ಕವಯತ್ರಿ ಡಾ.ಲತಾ ರಾಜಶೇಖರ್, ಸಂಗೀತ ಪಡಿಯಾರ್ ಅಭಿನಂದಿಸಲಾಯಿತು. ಅಲ್ಲದೆ, ಹಿರಿಯ ಬರಹಗಾರ ಎಂ.ಎಲ್.ಕೃಷ್ಣಸ್ವಾಮಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಬಿ.ಆರ್.ನಟರಾಜ್ ಜೋಯಿಸ್, ಡಾ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಕೆ.ಸೋಮಶೇಖರ್, ಮಹಿಳೆಯರಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ರಾಜ್ಯ ವಿಧಾಸಭೆಯ 224 ಸ್ಥಾನಗಳ ಪೈಕಿ 7 ಮಂದಿ ಮಾತ್ರ ಮಹಿಳೆಯರು ಇದ್ದಾರೆ. ಲೋಕಸಭೆಯಲ್ಲೂ ಕೂಡ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಹಿಳೆಯರಿಗೆ ಸಮಾನ ಅವಕಾಶ ನೀಡುವುದರ ಬಗ್ಗೆ ಪ್ರತಿಯೊಬ್ಬರು ಅಲೋಚಿಸಬೇಕು ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಮಹಿಳೆಯರನ್ನು ಸನ್ಮಾನಿಸಿರುವುದು ಉತ್ತಮ ಸಂಗತಿ. ಮಹಿಳೆಯರಿಗೆ ಇದೇ ರೀತಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಗಿನ್ನಿಸ್ ದಾಖಲೆಯ ನಾಟ್ಯಕಲಾ ಮಯೂರಿ ತೇಜಸ್ವಿನಿ ಭರತನಾಟ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಉಪ್ಪಂದ ರಾಜೇಶ್ ತಂಡದಿಂದ ಸಿ.ಅಶ್ವಥ್ ಹಾಡಿರುವ ಗೀತೆಗಳ ಗಾಯನ ಕಾರ್ಯಕ್ರಮ ಕೂಡ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ರಾಘವೇಂದ್ರ, ಸತೀಶ್ ಕುಮಾರ್ ಶರ್ಮಾ ಗುರೂಜಿ, ಅವಧೂತರಾದ ಅರ್ಜುನ್ ಗುರೂಜಿ, ಉದ್ಯಮಿ ಜೆ.ರವಿ, ಹಿರಿಯ ವಿಪ್ರ ಮುಖಂಡ ಬಿ.ವಿ.ಮಂಜುನಾಥ್, ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: