ಮೈಸೂರು

ಭವಿಷ್ಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿ: ಮಂಜುಳಾ ಮಾನಸ

ಇಂದು ಭಾರತ ಮಹಿಳಾ ಮಾರಾಟ ಜಾಲದಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದ್ದು  ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ, ಅವಕಾಶಗಳನ್ನು ನೀಡಿ ಮಹಿಳಾ ಸಬಲೀಕರಣದಲ್ಲಿ ಮೊದಲ ಸ್ಥಾನಕ್ಕೇರಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಮೈಸೂರು ಜಿಲ್ಲಾ ಸಮಿತಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಮತ್ತು ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮಹಿಳಾ ವಿಜ್ಞಾನ ಸಮಾವೇಶವನ್ನು ಮಂಜುಳಾ ಮಾನಸಾ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ಇಂದು ಮಹಿಳೆ ಮಾರಾಟದ ಸರಕಾಗಿರುವುದು ಖೇದಕರ. ಅವುಗಳನ್ನೆಲ್ಲ ಮೀರಿ ನಿಲ್ಲಲು ಮಹಿಳಾ ಸಬಲೀಕರಣ ಅತ್ಯಗತ್ಯ ಎಂದರು. ಸಂಸಾರದ ನೊಗಹೊತ್ತು ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಮಹಿಳೆಯರನ್ನು ಹೊರತುಪಡಿಸಿದ ಯಾವ ಕ್ಷೇತ್ರವೂ ಪ್ರಸ್ತುತದಲ್ಲಿ ಇಲ್ಲ. ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಪುರುಷರಿಗೆ ಸರಿಸಮಾನಳಾಗಿ ಮಹಿಳೆ ದಾಪುಗಾಲಿಡುತ್ತಿದ್ದು ತನ್ನ ಇತಿಮಿತಿಯೊಳಗೆ ಸಾಧನೆಗೈಯುತ್ತಿದ್ದಾಳೆ ಎಂದು ಹೇಳಿದರು.

ಮಹಿಳೆಗೆ ದೇಶದ ಆರ್ಥಿಕ ವ್ಯವಸ್ಥೆ ಹಾಗೂ ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯಿದೆ. ಪುರುಷರಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಬಾಹ್ಯಾಕಾಶದಿಂದ ದೇಶಕಾಯುವ ಸೇನೆಯವರೆಗೂ ತನ್ನ ಅದ್ವಿತೀಯ ಸೇವೆ ಸಲ್ಲಿಸುತ್ತಿದ್ದಾಳೆ. ಹಾಗಾಗಿ ಮಹಿಳೆಯರಲ್ಲಿ ಹೆಚ್ಚೆಚ್ಚು ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಎದೆಗುಂದದೆ ಮುನ್ನುಗ್ಗಬೇಕು. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರಲ್ಲದೇ, ಮಹಿಳೆಯರಿಗೆ ಇನ್ನಷ್ಟು ಅವಕಾಶ ನೀಡಿದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಇಂದಿನ ಅತ್ಯಾಧುನಿಕ ವೈಜ್ಞಾನಿಕ ಯುಗದಲ್ಲೂ ಮಹಿಳೆಯರ ಮೇಲೆ ಹತ್ತು ಹಲವು ದೌರ್ಜನ್ಯಗಳು ನಡೆಯುತ್ತಲೇ ಇವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ದೇಶದ ಆಸ್ತಿ ಎಂದು ಭಾವಿಸದೆ ಇರುವುದರಿಂದ, ಅವಕಾಶ ನೀಡಿದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಭಾವನೆಯಿಂದ ಮಹಿಳೆಯರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ.  ಮಹಿಳೆ ಎಂದರೆ ಕೇವಲ ಸಂತಾನೋತ್ಪತ್ತಿಗೆ ಸೀಮಿತವಾಗಿಸಿದ್ದ ಕಾಲವೀಗ ಬದಲಾಗಿದೆ. ಮಹಿಳೆಯರು ತಮ್ಮಲ್ಲಿರುವ ಮೌಢ್ಯತೆ ಕಂದಾಚಾರಗಳನ್ನು ಬದಿಗೊತ್ತಿ ವೈಜ್ಞಾನಿಕವಾಗಿ ಆಲೋಚಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕಾರ್ಯದರ್ಶಿ ವಸುಂದರಾ ಭೂಪತಿ, ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ವಿಜ್ಞಾನಿ ಡಾ.ಜಿ.ಎನ್.ಇಂದ್ರೇಶ್,  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಎಂ.ವೆಂಕಟೇಶ್, ಸಹಕಾರ್ಯದರ್ಶಿ ಟಿ.ಜಿ.ಪ್ರೇಮ್‍ಕುಮಾರ್, ಹಿರಿಯ ಸಾಹಿತಿ ಡಾ.ಹೇಮ ಪಟ್ಟಣ ಶೆಟ್ಟಿ, ರೂಪ ವೆಂಕಟೇಶ್, ಸುಮಂಗಲಾ ಮುಮ್ಮಿಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: