
ಮೈಸೂರು
ಭಾಷಣದಿಂದ ಕನ್ನಡ ಉದ್ಧಾರ ಸಾಧ್ಯವಿಲ್ಲ : ಡಾ.ಸಿ.ಪಿ.ಕೆ
ಕೇವಲ ಭಾಷಣಗಳಿಂದ ಮಾತ್ರ ಕನ್ನಡದ ಉದ್ಧಾರ ಸಾಧ್ಯವಿಲ್ಲ. ಅದಕ್ಕೆ ಕ್ರಿಯಾಶೀಲತೆಯಿರಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ಕನ್ನಡ ಲೇಖಕಿಯರ ಟ್ರಸ್ಟ್ ಹಾಗೂ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಭಾನುವಾರ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 61 ನೇ ಕನ್ನಡ ರಾಜ್ಯೋತ್ಸವ ಮತ್ತು ಪತ್ರಕರ್ತ ರಂಗನಾಥ್ ಮೈಸೂರು ಅವರ ‘ ಮತ್ತೆ ಬಿದ್ದ ಮಳೆ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಸಿ.ಪಿ.ಕೆ ಅವರು, ಕನ್ನಡ ಪರ ಹಲವಾರು ಸಂಘಟನೆಗಳು ಇದ್ದರೂ ಸಹ ಕನ್ನಡ ದುರಾವಸ್ಥೆಯಲ್ಲಿದೆ. ಇದಕ್ಕೆ ಕಾರಣ ಇಂಗ್ಲೀಷ್ ಭಾಷೆಯ ಮೇಲಿನ ವ್ಯಾಮೋಹ. ಇಂಗ್ಲೀಷ್ ಭಾಷೆ ನಮ್ಮ ಶತ್ರುವಲ್ಲ. ಅದನ್ನು ದ್ವೇಷಿಸುವುದು ಸರಿಯಲ್ಲ. ತಪ್ಪು ಎಲ್ಲಿದೆ ಎನ್ನುವುದನ್ನು ಆತ್ಮಶೋಧನೆ ಮಾಡಿಕೊಂಡಾಗ ತಿಳಿಯುತ್ತದೆ. ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿರುವ ನಿರಭಿಮಾನ ಮತ್ತು ಇಂಗ್ಲೀಷ್ ಭಾಷೆಯ ಮೇಲಿರುವ ಮೋಹವೆಂಬ ಸತ್ಯ ತಿಳಿಯುತ್ತದೆ. ಇಂಗ್ಲೀಷ್ ಭಾಷೆ ಕನ್ನಡಕ್ಕೆ ಮಾದಕವಿದ್ದಂತೆ ಎಂದು ಹೇಳಿದರು.
ಬಿ.ಎಂ.ಶ್ರೀ ಅವರು ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂದು ಹೇಳಿದ್ದಾರೆ. ಅದರಂತೆಯೇ ಇಂದು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡಕ್ಕೆ ಉಳಿಯಬಲ್ಲ ಅಂತಃಸತ್ವವಿದೆ. ಜೊತೆಗೆ ನಮ್ಮ ಬಹಿರಂಗ ಪ್ರಯತ್ನವೂ ಸಹ ಬೇಕಾಗುತ್ತದೆ. ಆಗ ಕನ್ನಡ ಭಾಷೆ ಏಳಿಗೆಯಾಗುತ್ತದೆ ಎಂದರು.
ಇಂಗ್ಲೀಷ್ ನ್ನು ಭಾಷೆಯಾಗಿ ಕಲಿಯೋಣ, ಆದರೆ ಮಾಧ್ಯಮವಾಗಿ ಬೇಡ. ಇಂದು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುರಂತ.ಇಂಗ್ಲೀಷ್ ಭಾಷೆಯ ಮೇಲಿನ ಮೋಹ ಅಸಮರ್ಥನೀಯವಾದುದು. ಇಂಗ್ಲೀಷ್ ಭಾಷೆ ಅವೈಜ್ಞಾನಿಕ ಮತ್ತು ವಿಚಿತ್ರವಾದುದು. ಕನ್ನಡಿಗರಿಗೆ ಕನ್ನಡವೇ ಗತಿ, ಅನ್ಯತಾ ಶರಣಂ ನಾಸ್ತಿ ಎಂಬಂತೆ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ, ಪ್ರಾತಿನಿಧ್ಯ ನೀಡಬೇಕು. ಕನ್ನಡ ಮಾತೃಭಾಷೆ. ಅದು ಬರಿ ಧರ್ಮವಲ್ಲ. ನಮ್ಮ ಸ್ವಧರ್ಮ. ನಾವು ಅದನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.
ಕೆ.ಆರ್.ನಗರದ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎನ್.ಮಂಜುರಾಜ್ ಮತ್ತೆ ಬಿದ್ದ ಮಳೆ ಕವನಸಂಕಲನವನ್ನು ಲೋಕಾರ್ಪಣೆಗೊಳಿಸಿದರು.
ಕನ್ನಡ ಲೇಖಕಿಯರ ಟ್ರಸ್ಟ್ ನ ಅಧ್ಯಕ್ಷೆ ಪ್ರೊ.ಸ.ನ. ಗಾಯತ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೈದ್ಯ ಡಾ.ಎಚ್.ಬಿ.ರಾಜಶೇಖರ್, ಹಿರಿಯ ಲೇಖಕಿ ಡಾ.ಕೆ.ಲೀಲಾಪ್ರಕಾಶ್ ಕೃತಿ ಕುರಿತು ಮಾತನಾಡಿದರು. ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಕೃತಿಯ ಲೇಖಕ ರಂಗನಾಥ್ ಮೈಸೂರು, ಲತಾ ರಾಜಶೇಖರ್, ಪ್ರೊ.ವೆಂಕೋಬರಾ.ವ್ ಮತ್ತಿತರರು ಉಪಸ್ಥಿತರಿದ್ದರು.