ಮೈಸೂರು

ಸ್ಮಾಲ್ ಈಸ್ ಬ್ಯೂಟಿಫುಲ್ ಜೀವನಕ್ಕೆ ಹತ್ತಿರವಾಗಿದೆ: ಪ್ರೊ. ಎಂ.ಆರ್. ಚಿಂತಾಮಣಿ ಬಣ್ಣನೆ

ಇ.ಎಫ್. ಸುಮೇಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಕೃತಿಯು ಬೌದ್ಧ ಸಿದ್ದಾಂತ, ಗಾಂಧಿ ಸಿದ್ದಾಂತ, ಕೃಷಿ, ಭಾರತದ ನಿರುದ್ಯೋಗ ಸಮಸ್ಯೆ, ಅಮೇರಿಕದ ಬಂಡವಾಳ ಸೇರಿದಂತೆ ಎಲ್ಲಾ ಸಮಗ್ರ ಮಾಹಿತಿಗಳನ್ನೂ ಒಳಗೊಂಡ ಸುಂದರ ಕೃತಿ ಎಂದು ಆರ್ಥಿಕ ತಜ್ಞ ಪ್ರೊ. ಎಂ.ಆರ್. ಚಿಂತಾಮಣಿ ಬಣ್ಣಿಸಿದರು.

ಭಾನುವಾರ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬಿ.ಶ್ರೀನಿವಾಸಕುಮಾರ್ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ  ಪ್ರೊ.ಎಂ.ಆರ್. ಚಿಂತಾಮಣಿ ಉಪನ್ಯಾಸ ನೀಡಿದರು. ಸ್ಮಾಲ್ ಈಸ್ ಬ್ಯೂಟಿಫುಲ್ ಕೃತಿ ಪ್ರಸ್ತುತ ಜೀವನಕ್ಕೆ ಅತ್ಯಂತ ಹತ್ತಿರವಾಗಿ ರಚಿತವಾಗಿದೆ. ಜೀವನದ ಎಲ್ಲಾ ಸಾರಾಂಶಗಳನ್ನು ಹೊಲಿಗೆ ಹಾಕಿ ಸುಂದರ ಅನುಭವಗಳೆಲ್ಲವನ್ನೂ ಕೃತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಜೀವನದ ಚಿಂತನೆಗಳನ್ನು, ಆದರ್ಶಗಳನ್ನು, ಪ್ರಸ್ತುತದಲ್ಲಿರುವ ಸಮಸ್ಯೆಗಳನ್ನು ಅವುಗಳಿಗೆ ಪರಿಹಾರವನ್ನು ಸರಳವಾಗಿ ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಇಂದಿನ ತಾಂತ್ರಿಕ ಯುಗದಲ್ಲಿ ಹ್ಯಾಂಡ್‍ಲೂಮ್‍ಗಿಂತ ಪವರ್‍ಲೂಮ್ ಬಳಕೆ ಹೆಚ್ಚಾಗುತ್ತಿದೆ. ಹ್ಯಾಂಡ್‍ಲೂಮ್‍ನಿಂದ ಉದ್ಯೋಗಾವಕಾಶ ಹಾಗೂ ಗುಡಿಕೈಗಾರಿಕೆಗಳು ಹೆಚ್ಚಾದರೆ ಪವರ್‍ಲೂಮ್‍ನಿಂದ ಸಮಯದ ಉಳಿತಾಯದೊಂದಿಗೆ ಗುಣಮಟ್ಟವನ್ನೂ ಕಾಯ್ದುಕೊಳ್ಳಬಹುದು ಎಂದು ಹ್ಯಾಂಡ್‍ಲೂಮ್ ಹಾಗೂ ಪವರ್‍ಲೂಮ್‍ಗಳ ನಡುವಿನ ಅಂತರವನ್ನು ವಿವರಿಸಿದರು.

ಶ್ರೀನಿವಾಸಕುಮಾರ್ ಅವರು ಅತ್ಯಂತ ಲವಲವಿಕೆಯುಳ್ಳ ವ್ಯಕ್ತಿ. ಉತ್ತಮ ಚಿಂತಕ. ಸದಾ ಪಾದರಸದಂತೆ ಎಲ್ಲರೊಂದಿಗೂ ಬೆರೆತು ಹಸನ್ಮುಖಿಯಾಗಿರುತ್ತಿದ್ದ ಸಮಾಜಮುಖಿ ಎಂದ ಅವರು, ಪ್ರತಿಯೊಬ್ಬರೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಇತಿಮಿತಿಯೊಳಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ. ಸಿ.ಎಸ್. ರಘುಪತಿ, ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಮಹೇಶ್ ಹರವೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: