ಪ್ರಮುಖ ಸುದ್ದಿಮೈಸೂರು

ದಾಖಲೆಯಿದ್ದರೆ ಕ್ರಮ ಕೈಗೊಳ್ಳಿ: ಮಾಜಿ ಸಂಸದ ವಿಶ್ವನಾಥ್ ಮತ್ತೆ ಕಿಡಿ

“ಸಂಸದರೇ ನನ್ನ ಬಳಿ ಕಾಳಧನವಿದ್ದರೆ ರೈಡ್ ಮಾಡಿಸಿ, ಬಾಯಿಗೆ ಬಂದಂತೆ ಅಪಾದನೆ ಮಾಡಿ ಓಡಿ ಹೋಗಬೇಡಿ. ಎಲ್ಲ ಆರೋಪಗಳನ್ನೂ ಸಾಬೀತುಪಡಿಸಿ. ಇಲ್ಲವಾದಲ್ಲಿ ನನ್ನ ಬಗ್ಗೆ ಮಾತನಾಡುವುದನ್ನು ಕೈಬಿಡಿ” ಎಂದು ಮಾಜಿ ಸಂಸದ ವಿಶ್ವನಾಥ್ ಅವರು ಸಂಸದ ಪ್ರತಾಪ್ ಸಿಂಹ ಅವರ ಆಪಾದನೆ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಮೇಲೆ ಮಾಡಿರುವ ವೈಯಕ್ತಿಕ ಅಪಾದನೆಗಳ ಕುರಿತು ಕೆರಳಿ ಕೆಂಡವಾಗಿದ್ದ ವಿಶ್ವನಾಥ್ ಅವರು, ಬಾಯಿಗೆ ಬಂದಂತೆ ಮಾತಾಡುವುದು ಬಿಡಿ, ನಲ್ವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿ ಸಾರ್ವಜನಿಕರಲ್ಲಿ ಅನವಶ್ಯಕ ಗೊಂದಲವುಂಟು ಮಾಡುತ್ತಿರುವುದನ್ನು ಕೈಬಿಡಿ. ಇಲ್ಲವೇ ಸಾಬೀತುಪಡಿಸಿ ಎಂದು ಖಡಾಖಂಡಿತವಾಗಿ ನುಡಿದರು.

ನಿಮ್ಮನ್ನು ಯಾಕೆ ಕೆಲಸದಿಂದ ಹೊರದಬ್ಬಿದರು ?

“ಪತ್ರಕರ್ತರಾಗಿ, ಅಂಕಣಕಾರರಾಗಿ ನಿಮ್ಮ ಪೂರ್ವಾಶ‍್ರಮದ ಬಗ್ಗೆ ಹಾಗೂ ನೀವು ವೃತ್ತಿ ಮಾಡುತ್ತಿದ್ದ ವೇಳೆ ಸಂಸ್ಥೆಯಿಂದ ಏಕೆ ಹೊರತಳ್ಳಿದರು ಎನ್ನುವುದನ್ನು ಸಾರ್ವಜನಿಕವಾಗಿ ಬಿಚ್ಚಿಡಿ. ಅದೇ ಕಾಳಧನ, ಭ್ರಷ್ಟಾಚಾರದ ಆರೋಪದಿಂದ ನಿಮ್ಮನ್ನು ಓಡಿಸಿದ್ದು. ಬೆತ್ತಲೆ ಜಗತ್ತಿನ ಬಗ್ಗೆ ಬರೆಯೋ ನೀವೇ ಸಾರ್ವಜನಿಕವಾಗಿ ಬೆತ್ತಲಾಗುವಿರಿ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ಹೇಳಿ ನಿವೇಶನ ಪಡೆದಿದ್ದೀರಿ” ಎಂದು ಪ್ರತಾಪ್ ಸಿಂಹ ಅವರನ್ನು ವಿಶ್ವನಾಥ್ ಲೇವಡಿ ಮಾಡಿದರು. ನನ್ನ ಮೆದುಳು, ಜ್ಞಾನ, ಬುದ್ಧಿ ಹಾಗೂ ದೈಹಿಕ ಆರೋಗ್ಯ ಎಲ್ಲವೂ ಸರಿ ಇದೆ. ನಿಮಗೆ ಆರೋಗ್ಯವಿಲ್ಲ ಅದನ್ನು ಸರಿಪಡಿಸಿಕೊಳ್ಳಿ ಎಂದು ಸಂಸದರ ವಿರುದ್ಧ ಹರಿಹಾಯ್ದರು.

ಹೊಟ್ಟೆಪಾಡಿಗೆ ವೃತ್ತಿ:

ಹೊಟ್ಟೆಪಾಡಿಗಾಗಿ ವೃತ್ತಿ ಮಾಡಬೇಕು. ನನ್ನ ಮಕ್ಕಳು ಪೆಟ್ರೋಲ್ ಬಂಕ್, ಹೋಟೆಲ್ ಹಾಗೂ ಎಲೆಕ್ಟಿಕಲ್ ಗುತ್ತಿಗೆದಾರರು. ಹಾಗೆಂದು ನಾವು ಭ್ರಷ್ಟಾಚಾರವೆಸಗಿಲ್ಲ, ಕಲಬೆರಕೆ ಪೆಟ್ರೋಲ್ ಮಾರಿದ್ದರೆ ಸ್ವತಃ ಸಂಸದರಾದ ನೀವೇ ಪ್ರಕರಣ ದಾಖಲಿಸಿ. ಪೆಟ್ರೋಲಿಯಂ ಮತ್ತು ಕೆಮಿಕಲ್ಸ್ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ಕ್ರಮಕೈಗೊಳ್ಳಿ. ನಾವು ಬಂಕ್ ಮಾಲೀಕರಲ್ಲ, ಕೇವಲ ಮಾರಾಟಗಾರರು. ನಾನು ಸತ್ಯ ಹರಿಶ‍್ಚಂದ್ರನಲ್ಲ, ಆದರೆ ಪ್ರಾಮಾಣಿಕ. ನಾನೇನು ಗಣಿಗಾರಿಕೆ, ಮರಳುಗಾರಿಕೆ, ವರ್ಗಾವಣೆ  ದಂಧೆ ನಡೆಸಿದವನಲ್ಲ ಎಂದು ಕುಹಕವಾಡಿದರು.

ಸಾಂಧರ್ಭಿಕ ಅರ್ಥ ತಿಳಿಯದೆ ಮಾತಾಡಬೇಡಿ :

ನ.10ರಂದು ಬೆಳಗಾವಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಕಳೆದ ಎಪ್ಪತ್ತು ವರ್ಷದಿಂದಲೂ ದೇಶವನ್ನು ಲೂಟಿಕೂರರು ಆಳ್ವಿಕೆ ನಡೆಸಿದ್ದಾರೆ. ನಾನೀಗ ಕ್ರಾಂತಿ ಮಾಡಿದೆ” ಎಂದು ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನಷ್ಟೆ. ಸಾಂಧರ್ಭಿಕ ಅರ್ಥ ತಿಳಿಯದ ನೀವು ಯಾವ ಸೀಮೆ ಪತ್ರಕರ್ತ, ಸಾಹಿತಿ ಎಂದು ಛೇಡಿಸಿದರು.

ಯುವಜನತೆಯಲ್ಲಿ ತಪ್ಪು ಅಭಿಪ್ರಾಯ :

ಹಿಂದೆ ಆಳಿದ ಎಲ್ಲಾ ನಾಯಕರನ್ನು ಕಳನಾಯಕರಂತೆ ಬಿಂಬಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮೂಹಕ್ಕೆ ಭ್ರಮೆ ಸೃಷ್ಟಿಸುತ್ತಿದ್ದಾರೆ. ಅದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ನೋಟು ಅಮಾನ್ಯ ಹಾಗೂ ಉಳುವವರಿಗೆ ಭೂಮಿ ನೀತಿ ಮೊರಾರ್ಜಿ ದೇಸಾಯಿಯವರು ಜಾರಿಗೆ ತಂದ ಯೋಜನೆಗಳು. ಅವನ್ನೇ ಕಾಪಿ ಮಾಡಿ ಬ್ರಾಂಡ್‍ ನೇಮ್ ಕೊಟ್ಟಿದ್ದಾರೆ, ಯುವಕರೇ ಇತಿಹಾಸ ತಿಳಿದುಕೊಳ್ಳಿ ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಮಗನೇ ಹೊರತು, ಭಾರತ ಮೋದಿಯವರ ಅಥವಾ ಆರ್‍ಎಸ್‍ಎಸ್ ಮಗನಲ್ಲ ಎಂದರು.

ಕಾಂಗ್ರೆಸ್ಸಿಗರಿಗೆ ನೀವೇ ಮುಂದುವರಿಯಬೇಕೆಂಬ ಆಸೆ…!

ಸಂಸದರೇ ನೀವು ಜೆಡಿಎಸ್ಸೋ, ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ ಎಂದು ಮೊದಲು ಸ್ಪಷ್ಟಪಡಿಸಿ. ಸ್ವತಃ ಕಾಂಗ್ರೆಸಿಗರೇ ತಮ್ಮನ್ನು ಕಾಯಂ ಸಂಸದರಾಗಿರುವಂತೆ ಆಶಿಸುತ್ತಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ವಿಶ್ವನಾಥ್ ನೀಡಿದರು.

ಕಪ್ಪು ಹಣದಿಂದಲೇ ಚುನಾವಣೆಗಳು ನಡೆಯೋದು..!

ದೇಶದ ಎಲ್ಲಾ ಚುನಾವಣೆಗಳು ನಡೆಯುವುದು ಕಪ್ಪು ಹಣದಿಂದಲೇ ಇದಕ್ಕೆ ಕಾಂಗ್ರೆಸ್, ಬಿಜೆಪಿ ಅಥವಾ ಮೋದಿಯವರು ಹೊರತಾಗಿಲ್ಲ, ಕಪ್ಪು ಹಣ ಇಲ್ಲದೇ ಚುನಾವಣೆ ಅಸಾಧ‍್ಯ. ಸೋಮವಾರದಂದು ನಡೆಯುವ “ಆಕ್ರೋಶ್ ದಿವಸ್‍” ಭಾರತ್ ಬಂದ್‍ಗೆ ಕಾಂಗ್ರೆಸಿಗನಾಗಿ ನನ್ನ ಬೆಂಬಲವಿದೆ. ನೋಟು ಅಮಾನ್ಯತೆಗೆ ವಿರೋಧ ವ್ಯಕ್ತಪಡಿಸಿದರೆ ಕಪ್ಪು ಹಣ ಹೊಂದಿರುವವ ಎನ್ನುವ ಹಣೆಪಟ್ಟಿ ಹಚ್ಚುವರು. ಎಷ್ಟೋ ಮಂದಿ ಕಾಳಧನಿಕರು ಇಂದು ನೋಟು ಅಮಾನ್ಯವನ್ನು ಮೇಲ್ನೋಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ ಮೂರು ದಿನಗಳಿಂದ ಮಾಜಿ ಹಾಗೂ ಹಾಲಿ ಸಂಸದರ ಬಹಿರಂಗ ಅರೋಪ ಮತ್ತು ಪ್ರತ್ಯರೋಪಗಳಿಗೆ ಇಂದು ಮತ್ತೊಮ್ಮೆ ಸಾಕ್ಷಿಯಾಗಿದ್ದು ಪತ್ರಕರ್ತರ ಭವನ. ಅವರೊಂದಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಂಕರ್, ಗ್ರಾಮಾಂತರ ಘಟಕದ ಅಧ್ಯಕ್ಷ ಡಾ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶೌಕತ್ ಅಲೀಖಾನ್, ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: