ಮೈಸೂರು

ಕ್ಯಾನ್ಸರ್ ರೋಗಿಗಳಿಗೆ “ಚೈತನ್ಯ ಶಿಬಿರ”

ಸಂಜೀವಿನಿ ಸಮಾನ ಮನಸ್ಕರ ವೇದಿಕೆಯಿಂದ ರಾಜ್ಯಮಟ್ಟದ ಕ್ಯಾನ್ಸರ್ ರೋಗಿಗಳ ಚೈತನ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕ್ಯಾನ್ಸರ್‍ನಿಂದ ಗುಣಮುಖರಾದ ಶಿಕ್ಷಕ ಬಿ. ರಮೇಶ್ ತಿಳಿಸಿದರು.

ಅವರು ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿ.24 ರಿಂದ 26 ರ ವರೆಗೆ ಮೂರು ದಿನಗಳ ಕಾಲ ಹುಣಸೂರು ತಾಲೂಕಿನ ಬಿಳಿಕೆರೆಯ “ಬಿಳಿಕೆರೆ ಕಲ್ಯಾಣ ಮಂಟಪ”ದಲ್ಲಿ ಆಯೋಜಿಸಲಾಗಿದ್ದು ಶಿಬಿರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ತಜ್ಞ ವೈದ್ಯರ, ಚಿಂತಕರ, ಹಾಸ್ಯ ಕಲಾವಿದರಿಂದ, ಸ್ವಾಮೀಜಿಗಳಿಂದ ಪ್ರವಚನ, ಯೋಗ, ಧ‍್ಯಾನ ಹಾಗೂ ಪ್ರಾಣಾಯಾಮವನ್ನು ಹೇಳಿಕೊಡಲಾಗುವುದು. ರೋಗಿಯ ಜೊತೆ ಒಬ್ಬ ಸಹಾಯಕರು ಪಾಲ್ಗೊಳ್ಳಬಹುದು. ಪ್ರತಿ ಎರಡು ತಿಂಗಳಿಗೊಮ್ಮೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ.

ಕ್ಯಾನ್ಸರ್ ಪೀಡಿತರು ಧೈರ್ಯಗೆಡದೆ ಆತ್ಮವಿಶ‍್ವಾಸ ಹಾಗೂ ಛಲದಿಂದ ಜೀವನ ಎದುರಿಸಿ, ತಜ್ಞ ವೈದ್ಯರ ಅಣತಿಯಂತೆ ಔಷಧೋಪಚಾರ, ಶಿಸ್ತುಬದ್ಧ ಜೀವನದಿಂದ ಕ್ಯಾನ್ಸರ್ ಪೀಡಿತರೇ ಹತ್ತಾರು ವರ್ಷಗಳಿಂದ ಆರೋಗ್ಯಯುತವಾಗಿ ಬಾಳುತ್ತಿದ್ದಾರೆ. ಆಹಾರಕ್ರಮದಲ್ಲಿ ಸಿರಿಧಾನ್ಯಗಳನ್ನು ಬಳಿಸಿ. ಕ್ಯಾನ್ಸರ್ ರೋಗಪೀಡಿತರು ಹಾಗೂ ಸೈನಿಕರು ಒಂದೇ ಸಮಸ್ಯೆಯನ್ನು ಎದುರಿಸುವರು. ದೇಶ ಕಾಯುವ ಸೈನಿಕರಿಗೆ ಸಾವು ಕಣ್ಮುಂದಿದ್ದರೆ, ಕ್ಯಾನ್ಸರ್ ರೋಗಿಗಳಿಗೆ ಬೆನ್ನ ಹಿಂದೆ ಇರುವುದು. ಇದಕ್ಕೆ ವಿಚಲಿತರಾಗದೆ ಧೈರ್ಯದಿಂದ ಎದುರಿಸಿ ರೋಗವು ಓಡಿಹೋಗುವುದು. ಕ್ಯಾನ್ಸರ್‍ಗೆ ನಿಖರ ಕಾರಣವಿಲ್ಲ ಆದರೆ ಬಂದಾಗ ಹೆದರಬೇಡಿ ಎಂದು ಆತ್ಮವಿಶ‍್ವಾಸದ ನುಡಿಗಳನ್ನಾಡಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾನ್ಸರ್ ರೋಗ ಗುಣಮುಖರಾದ ಗಿರೀಶ್, ಡಾ. ಶ್ರೀನಿವಾಸ್ ಕ್ಯಾತನಹಳ್ಳಿ, ಸಮಾಜಸೇವಕ ಗೋಪಾಲಕೃಷ್ಣ, ಪ್ರಸಾದ್, ಪ್ರಸನ್ನ ಹಾಗೂ ಮಂಜು ಇದ್ದರು.

ಹೆಚ್ಚಿನ ಮಾಹಿತಿಗಾಗಿ ರಮೇಶ್, ಟಿ.ಎ.ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆ, ವಿದ್ಯಾರಣ್ಯಪುರಂ, ಮೈಸೂರು ಮೊಬೈಲ್ ಸಂಖ್ಯೆ 8197203626 ಸಂಪರ್ಕಿಸಬಹುದು.

Leave a Reply

comments

Related Articles

error: