ಮೈಸೂರು

ಪ್ರಧಾನಿ ದೇಶದ ಜನರನ್ನು ಮರುಳು ಮಾಡುತ್ತಿದ್ದಾರೆ: ಎ.ಕೆ. ಸುಬ್ಬಯ್ಯ ಟೀಕೆ

500 ಮತ್ತು 1000ರೂ. ಮುಖಬೆಲೆಯ ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ಮೋದಿಯವರು ದೇಶದ ಜನರನ್ನು ಮರುಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ವಕೀಲ ಎ.ಕೆ.ಸುಬ್ಬಯ್ಯ ಟೀಕಿಸಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ  ಬುಧವಾರ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ನೋಟು ರದ್ದು  ಕ್ರಮ – ಬಹುಜನ ಭಾರತದ ಮೇಲಾಗುವ ಪರಿಣಾಮ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎ.ಕೆ.ಸುಬ್ಬಯ್ಯ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಮೋದಿಯವರು ನೋಟನ್ನು ಅಪನಗದೀಕರಣಗೊಳಿಸುವ ಮೂಲಕ  ಹೊಸರೀತಿಯ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.  ಅಪನಗದೀಕರಣದಿಂದ ದೇಶ ಸುಧಾರಿಸಿಕೊಳ್ಳಲು ಕನಿಷ್ಠ ಎರಡು ವರ್ಷವಾದರೂ ಬೇಕು. ಕಪ್ಪು ಹಣ ಹೊಂದಿರುವವರಿಗೆ ಸಂಕಷ್ಟವಿಲ್ಲ. ಬಡಬಗ್ಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಬಡಬಗ್ಗರು ಸರತಿ ಸಾಲಿನಲ್ಲಿ ನಿಂತು ಇನ್ನಿಲ್ಲದ ವ್ಯಥೆ ಅನುಭವಿಸುತ್ತಿದ್ದಾರೆ. ಸಂಸತ್ತಿನ ಹೊರಗೆ ಬೇಕಾದಷ್ಟು ಭಾಷಣ ಬಿಗಿಯುತ್ತಾರೆ. ಆದರೆ ಸಂಸತ್ತಿನ ಒಳಗೆ ಕಾಲಿಡುತ್ತಿಲ್ಲ ಎಂದು ವ್ಯಂಗ್ಯವಾಡಿದರು. ದೇಶದ ಬಗ್ಗೆ ತನಗೆ ಅಪಾರ ಕಾಳಜಿ ಎಂದು ತೋರಿಸಿಕೊಳ್ಳುವ ಮೋದಿ ದೇಶವಾಸಿಗಳ ಬಾಳಿಗೆ ಬೆಂಕಿ ಹಚ್ಚಿದ್ದಾರೆ. ನೋಟು ರದ್ದುಗೊಳಿಸುವ ವಿಚಾರವನ್ನು ತಮ್ಮ ಆಪ್ತರಿಗೆ ಮೊದಲೇ ತಿಳಿಸಿ ಅವರ ಹಣಕ್ಕೆ ಭದ್ರತೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು. ನೋಟು ಬದಲಿಸಲು ಸಾರ್ವಜನಿಕರಿಂದ ಗುರುತಿನ ಚೀಟಿಯನ್ನು ಕೇಳುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದರು. ನೋಟು ರದ್ಧತಿಯ ಕ್ರಮದಿಂದ ದೇಶದ ಬಡಬಗ್ಗರು ಕೂಡಿಟ್ಟ ಚಿಲ್ಲರೆ ಹಣವನ್ನು ಬ್ಯಾಂಕಿನಲ್ಲಿ ಇಡುವಂತಾಯಿತು. ಅವರು ದುಡಿದದ್ದು ಅಂದೇ ವ್ಯಯವಾಗುತ್ತದೆ. ಮುಂದಿನ ತಲೆ ಮಾರುಗಳಿಗೆ ರಕ್ಷಣೆ ಮಾಡಿಕೊಳ್ಳುವುದಿಲ್ಲ ಎಂದರು.

ಸಂಪನ್ಮೂಲ ವ್ಯಕ್ತಿ ಮೋಹನ್ ಜಿ.ಕೆ ಅವರು ನೋಟು ರದ್ದು ಕ್ರಮ- ಬಹುಜನ ಭಾರತದ ಮೇಲಾಗುವ ಪರಿಣಾಮ ಕುರಿತು ಉಪನ್ಯಾಸ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಿ.ಬೀರಯ್ಯ, ಆಹಾರ ತಜ್ಞ ಡಾ.ಕೆ.ಸಿ.ರಘು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

Check Also

Close
error: