ಕರ್ನಾಟಕ

ಶಾಸಕರು ದುಡ್ಡಿನ ಬಲದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆ : ಮಾಜಿ ಶಾಸಕ ಬಿ.ಪ್ರಕಾಶ್

ರಾಜ್ಯ(ಮಂಡ್ಯ)ಮಾ.20:- ಶಾಸಕರು ದುಡ್ಡಿನ ಬಲದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆ, ಪಕ್ಷಕ್ಕಾಗಿ ದುಡಿದ ನಿಜವಾದ ಕಾರ್ಯಕರ್ತನನ್ನು ಗುರುತಿಸುವ ಕೆಲಸ ಮಾಡುತ್ತಿಲ್ಲ, ಈ ಪಕ್ಷ ಕಾರ್ಯಕರ್ತರಿಂದಲೇ ನಿಂತಿರುವ ಪಕ್ಷ, ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಪಕ್ಷಕ್ಕಾಗಿ ದುಡಿದ ಶ್ರಮದಿಂದಲೇ ಎಪಿಎಂಸಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಇನ್ನಿತರ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದು ಇವೆಲ್ಲವನ್ನೂ ನಾನೇ ಗೆಲ್ಲಿಸಿದೆ ಎಂಬ ಭಾವನೆಯನ್ನು ಬಿಡಬೇಕು ಎಂದು ಮಾಜಿ ಶಾಸಕ ಬಿ.ಪ್ರಕಾಶ್ ತಿಳಿಸಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಣದಿಂದಲೇ ಶಾಸಕನಾಗಬಲ್ಲೇ ಎಂಬ ಅಹಂ ದೂರ ಮಾಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆಯನ್ನು ಶಾಸಕರಿಗೆ ನೀಡಿದರು.

ಈ ಹಿಂದೆ ಟಿಎಪಿಸಿಎಂಸ್, ಪಿ.ಎಲ್.ಡಿ.ಬ್ಯಾಂಕ್, ಮನ್‍ಮುಲ್ ಒಂದು ಸ್ಥಾನವನ್ನೂ ಸಹ ಕಾಂಗ್ರೆಸ್ ಪಕ್ಷಕ್ಕೆ ನೀಡದಂತೆ ಜೆಡಿಎಸ್ ಪಕ್ಷವು ಎಲ್ಲವನ್ನು ಗೆಲ್ಲುತ್ತಿತ್ತು. ಆದರೆ ನಾರಾಯಣಗೌಡರು ಶಾಸಕರಾದ ಮೇಲೆ ಟಿಎಪಿಸಿಎಂಎಸ್, ಪಿ.ಎಲ್.ಡಿ.ಬ್ಯಾಂಕ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಮನ್‍ಮುಲ್‍ನ ಎರಡೂ ಸ್ಥಾನವೂ ಕಾಂಗ್ರೆಸ್ ಪಾಲಾಗಿವೆ ಇನ್ನು ಎಪಿಎಂಸಿಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ. ಈಗ 3ಸ್ಥಾನ ಕಾಂಗ್ರೆಸ್ ಗೆದ್ದಿದೆ. ಆದರೂ ನಾನು ಶಾಸಕನಾದ ಮೇಲೆ ಎಲ್ಲವನ್ನೂ ಗೆದ್ದೆ ಎಂಬ ಅಹಂ ಮಾತ್ರ ಶಾಸಕರಿಂದ ದೂರವಾಗಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಗಳು ಲಕ್ಷಾಂತರ ರೂ ಸಾಲ ಮಾಡಿ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಐವರು ಜಿ.ಪಂ.ಸದಸ್ಯರು, 16 ತಾ.ಪಂ.ಸದಸ್ಯರು ಗೆದ್ದಿದ್ದಾರೆ ಇದನ್ನು ನಾರಾಯಣಗೌಡರು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಪಕ್ಷಕ್ಕೆ ವ್ಯಕ್ತಿಕ್ಕಿಂತ ಪಕ್ಷದ ವರ್ಚಸ್ಸಿನಿಂದ ಅಧಿಕಾರಕ್ಕೇರುವ ಶಕ್ತಿ ಇದೆ ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ಶಾಸಕರಿಗೆ ಸಲಹೆ ನೀಡಿದರು.

ಮಾ. 20ರಿಂದ ಸಂತೇಬಾಚಹಳ್ಳಿ ಹೋಬಳಿಯ ಶ್ರೀ ಗವಿರಂಗನಾಥ ದೇವಸ್ಥಾನದ ಶ್ರೀ ಕ್ಷೇತ್ರದಿಂದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಪಕ್ಷದ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖಂಡರು ತಿಳಿಸಿದರು.

ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಳೆದ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ನಮಗೆ ನೀಡಿದ ವಾಗ್ದಾನದಂತೆ ಹಾಲಿ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಟಿಕೆಟ್ ನೀಡಬಾರದು ಎಂದು ಮಾಜಿ ಶಾಸಕ ಬಿ.ಪ್ರಕಾಶ್, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್.ರಮೇಶ್ ಹಾಗೂ ಜೆಡಿಎಸ್ ಮುಖಂಡ ಬಸ್ ಕೃಷ್ಣೇಗೌಡ, ರಾಜಾಹುಲಿ ದಿನೇಶ್ ಅವರುಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ , ಜಿ.ಪಂ.ಸದಸ್ಯ ಬಿ.ಎಲ್.ದೇವರಾಜು, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್.ರಮೇಶ್, ಮುಖಂಡರಾದ ಬಸ್ ಕೃಷ್ಣೇಗೌಡ, ರಾಜಾಹುಲಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: