ಕರ್ನಾಟಕಪ್ರಮುಖ ಸುದ್ದಿ

ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಸಚಿವ ತನ್ವೀರ್ ಸೇಠ್

ರಾಜ್ಯ(ಬೆಂಗಳೂರು) ಮಾ. 20:- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೌಲ್ಯಮಾಪನವು ಮಾ. 26 ರಂದು ಆರಂಭವಾಗಲಿದ್ದು, ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಮಾ.23 ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭಗೊಂಡು ಏಪ್ರಿಲ್ 6 ರವರೆಗೆ ನಡೆಯಲಿದೆ.  ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಬೇನಾಮಿ ವಿದ್ಯಾರ್ಥಿಗಳು ಹಾಗೂ ನಕಲು ಮಾಡುವುದನ್ನು ಪತ್ತೆಹಚ್ಚಲು ಪರೀಕ್ಷಾ ಕೇಂದ್ರಗಳಲ್ಲಿ ನೂರಕ್ಕೆ ನೂರರಷ್ಟು ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ಕಳೆದ ವರ್ಷ ಪರೀಕ್ಷಾ ಮೌಲ್ಯಮಾಪನಕ್ಕಾಗಿ 42 ಕೇಂದ್ರಗಳನ್ನು ಗುರುತಿಸಲಾಗಿತ್ತು. ಈ ಬಾರಿ 53 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಇದೇ ಮೊದಲ ಬಾರಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ ಎಂದು ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೌಲ್ಯಮಾಪನ ಕಾರ್ಯವು 10 ರಿಂದ 15 ದಿನಗಳವರೆಗೆ ನಡೆಯಲಿದೆ. ಬೆಂಗಳೂರು ಉತ್ತರ-10, ಬೆಂಗಳೂರು ದಕ್ಷಿಣ-13, ಮೈಸೂರು-8, ಧಾರವಾಡ-3, ಶಿವಮೊಗ್ಗ-2, ದಾವಣಗೆರೆ-2, ಕಲ್ಬುರ್ಗಿ-2, ಮಂಗಳೂರು-7 ಹಾಗೂ ಬೆಳಗಾಂ-6 ಸೇರಿದಂತೆ ಒಟ್ಟು 53 ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. 3779 ಉಪ ಮುಖ್ಯ ಮೌಲ್ಯ ಮಾಪಕರು, 20,111 ಸಹಾಯಕ ಮೌಲ್ಯ ಮಾಪಕರು ಸೇರಿದಂತೆ ಒಟ್ಟು 23,890 ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಈಗಾಗಲೇ ಮೌಲ್ಯ ಮಾಪನ ಕಾರ್ಯಕ್ಕೆ ನೇಮಕಾತಿ ಆದೇಶವನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು. ಮೌಲ್ಯ ಮಾಪನ ಕೇಂದ್ರಗಳಲ್ಲಿ ಮಾ. 22 ರಂದು ವೀಕ್ಷಕರು, ಮಾ. 24 ರಂದು ಉಪಮುಖ್ಯ ಮೌಲ್ಯ ಮಾಪಕರು, 26 ರಂದು ಸಹಾಯಕ ಮೌಲ್ಯ ಮಾಪಕರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರತಿ ವರ್ಷ 18 ರಿಂದ 19 ಸಾವಿರ ಮೌಲ್ಯ ಮಾಪಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಈ ಬಾರಿ ಮೌಲ್ಯ ಮಾಪನವನ್ನು ಆದಷ್ಟು ಚುರುಕುಗೊಳಿಸಲು ಹೆಚ್ಚು ಮೌಲ್ಯ ಮಾಪಕರಿಗೆ ನೇಮಕಾತಿ ಆದೇಶವನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು. ಪ್ರಶ್ನೆ ಪತ್ರಿಕೆಯನ್ನು ತಿದ್ದುಪಡಿ ಮಾಡುವ ಅವಕಾಶ ಈ ಬಾರಿ ಮುದ್ರಣ ಇಲಾಖೆಗೆ ನೀಡುವುದಿಲ್ಲ. ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆಗಳ ಕರಡನ್ನು ತಿದ್ದಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈಗಾಗಲೇ ಎಲ್ಲ ಕೀ ಉತ್ತರಗಳನ್ನು ವೆಬ್‌ಸೈಟ್ ಮೂಲಕ ಮುದ್ರಣ ಮಾಡುವಲ್ಲಿ ಅಂತಿಮ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗಳಿಗೆ ಶುಲ್ಕ ಕಟ್ಟಲು ಕ್ಯೂ ನಿಲ್ಲುವ ಪದ್ಧತಿಗೆ ಇತಿಶ್ರೀ ಹಾಡುವ ಸಲುವಾಗಿ ಆನ್‌ಲೈನ್ ಮೂಲಕ ಹಣ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಮುಂದಿನ ವರ್ಷದಿಂದ ದ್ವಿತೀಯ ಪಿಯು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಮೇ ತಿಂಗಳ ಕೊನೆಯ ವಾರದಲ್ಲಿ ನಡೆಸಲಾಗುವುದು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಮೇ ತಿಂಗಳ ಕೊನೆಯ ವಾರದಲ್ಲಿ ನಡೆಸಲಾಗುವುದು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ನಂತರ ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಕಾಪಿ ಪಡೆಯಲು ಹಾಗೂ ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲಾಖಾ ವೆಬ್ ಸೈಟ್ www.pue.kar.nic.in ನಲ್ಲಿ ಮಾಹಿತಿ ನೀಡಲಾಗುವುದು ಎಂದರು.ಪ್ರಥಮ ಪಿಯುಸಿ ಪರೀಕ್ಷೆಯು ಏ. 16 ರಿಂದ 28 ರವರೆಗೆ ನಡೆಸಲು ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಸಚಿವ ತನ್ವೀರ್‌ಸೇಠ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಪಿ. ಶಿಖಾ ಉಪಸ್ಥಿತರಿದ್ದರು (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: