
ಕರ್ನಾಟಕಪ್ರಮುಖ ಸುದ್ದಿ
ತೀರ್ಥಹಳ್ಳಿ: ಜೆಡಿಎಸ್ನ ಆರ್.ಎಂ.ಮಂಜುನಾಥ ಗೌಡ ಪರ ಗೀತಾ ಶಿವರಾಜ್ ಕುಮಾರ್ ಪ್ರಚಾರ ಆರಂಭ
ಶಿವಮೊಗ್ಗ (ಮಾ.20): ಹ್ಯಾಟ್ರಿಕ್ ಹೀರೊ ನಟ ಶಿವರಾಜ್ ಕುಮಾರ್ ಪತ್ನಿ ಹಾಗೂ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾದ ಗೀತಾ ಶಿವರಾಜ್ ಕುಮಾರ್ ಅವರು ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಆರಂಭಿಸಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್.ಎಂ.ಮಂಜುನಾಥ ಗೌಡ ಅವರ ಪರ ಇಂದು ಪ್ರಚಾರ ನಡೆಸಿದರು. ತೀರ್ಥಹಳ್ಳಿಯ ರಿಪ್ಪನ್ ಪೇಟೆ ಸಮೀಪದ ವಡಹೊಸಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗೀತಾ ಅವರು ಪಾಲ್ಗೊಂಡು ಪ್ರಚಾರ ಕೈಗೊಂಡರು.
ಕಳೆದ ಬಾರಿ ತೀರ್ಥಹಳ್ಳಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲೊಪ್ಪಿಕೊಂಡಿದ್ದ ಆರ್.ಎಂ.ಮಂಜುನಾಥ ಗೌಡ ಅವರು ಈ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಅವರು, ಇಲ್ಲಿ ಸತತ ಎರಡು ಬಾರಿ ಗೆದ್ದಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಎಂ.ವಿ. ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಮಳವಳ್ಳಿ ಮಂಜುನಾಥ್, ಎನ್. ವರ್ತೇಶ್, ಸುಮತಿ ಪೂಜಾರ್ ಇನ್ನೂ ಹಲವು ಮುಖಂಡರು ಗೀತಾ ಅವರ ಜೊತೆಯಲ್ಲಿ ಪ್ರಚಾರ ಕೈಗೊಂಡು ಮತ ಯಾಚಿಸಿದರು.(ಎನ್.ಬಿ)