ಕರ್ನಾಟಕ

ಚುನಾವಣಾ ಪ್ರಚಾರಕ್ಕೆ ಬಳಸುವ ಸಾಮಾಗ್ರಿ ದರ ನಿಗಧಿ: ಜಿಲ್ಲಾಧಿಕಾರಿಗಳಿಂದ ಸಲಹೆ

ಮಡಿಕೇರಿ,ಮಾ.20-ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ಸಾಮಾಗ್ರಿಗಳಿಗೆ ಮಾರುಕಟ್ಟೆ ದರ ನಿಗಧಿಪಡಿಸುವ ಸಭೆಯು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬ್ಯಾನರ್, ಬಂಟಿಂಗ್ಸ್, ಪೋಸ್ಟರ್ ಮತ್ತಿತರ ಬಗ್ಗೆ ದರ ನಿಗದಿಪಡಿಸಲಾಗಿದ್ದು, ಆಕ್ಷೇಪಗಳಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಸಬಾರದು. ಅಳವಡಿಸಬೇಕಿದ್ದಲ್ಲಿ ಅನುಮತಿ ಪಡೆಯಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮುದ್ರಣ ಮಾಡುವ ಮೊದಲು ಜಿಲ್ಲಾಧಿಕಾರಿಯವರ ಅನುಮತಿ ಪಡೆಯಬೇಕು. ಎಷ್ಟು ಪ್ರತಿ ಮುದ್ರಣ ಮಾಡಲಾಗುತ್ತಿದೆ ಮತ್ತು ವೆಚ್ಚದ ಬಗ್ಗೆ ವಿವರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಈ ಬಾರಿ ವಿವಿ ಪ್ಯಾಟ್ ಇರುವುದರಿಂದ ಒಂದು ಮತಗಟ್ಟೆಯಲ್ಲಿ 1250 ಕ್ಕಿಂತ ಹೆಚ್ಚು ಮತದಾರರು ಇದ್ದಲ್ಲಿ ಹೆಚ್ಚುವರಿ ಮತಗಟ್ಟೆಯನ್ನು ಸ್ಥಾಪಿಸಲಾಗುವುದು. ಮುದ್ರಣ ಮಾಲೀಕರು ಮತ್ತು ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಜಿಲ್ ಕೃಷ್ಣ(ಬಿಜೆಪಿ), ತನ್ನಿರಾ ಮೈನಾ(ಕಾಂಗ್ರೆಸ್) ಸಭೆಯಲ್ಲಿ ಉಪಸ್ಥಿತರಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: