ಮೈಸೂರು

ಜಾನಪದ ಜೀವರಕ್ಷಕ ಸಂಸ್ಕೃತಿಯಾಗಿದೆಯೇ ಹೊರತು ಜೀವವಿನಾಶಕ ಸಂಸ್ಕೃತಿಯಲ್ಲ : ಪ್ರೊ.ಸಿದ್ಧಾಶ್ರಮ

ಮೈಸೂರು,ಮಾ.21:- ಜಾನಪದ ಜೀವರಕ್ಷಕ ಸಂಸ್ಕೃತಿಯಾಗಿದೆಯೇ ಹೊರತು ಜೀವವಿನಾಶಕ ಸಂಸ್ಕೃತಿಯಲ್ಲ ಎಂದು ಖ್ಯಾತ ಸಾಹಿತಿ, ಚಿಂತಕ ಪ್ರೊ.ಸಿದ್ಧಾಶ್ರಮ ತಿಳಿಸಿದರು.

ಜಯಲಕ್ಷ್ಮಿಪುರಂನಲ್ಲಿರುವ ಸಂತಜೋಸೆಫರ ಕಾಲೇಜಿನ ಸಭಾಂಗಣದಲ್ಲಿಂದು ಕನ್ನಡ ಜಾನಪದ ಪರಿಷತ್ ಮೈಸೂರು ಜಿಲ್ಲಾ ಘಟಕ, ಹಾಗೂ ಸಂತ ಜೋಸೆಫರ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವಗೊಂಬೆಯಾಟ ದಿನಾಚರಣೆ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಹಳ್ಳಿಯಲ್ಲಿ ಸಣ್ಣಾಟ, ದೊಡ್ಡಾಟ ನೋಡಿ ಜಾನಪದವನ್ನು ಮೈಗೂಡಿಸಿಕೊಂಡು ಬಂದವನು. ಜಾನಪದ ಎನ್ನುವುದು ವಿಶ್ವಪ್ರಜ್ಞೆಯಾಗಿ ಕಾಣಿಸುತ್ತಿದೆ. ಜಾನಪದ ಕೇವಲ ಹಳ್ಳಿಗಳಿಗೆ ಮಾತ್ರ ಸೀಮಿತವಲ್ಲ. ಅಮೇರಿಕದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳೂ ಅಧ್ಯಯನ ಮಾಡುತ್ತಿದ್ದಾರೆ. ಜಾನಪದ ಕೇವಲ ಹಳ್ಳಿಗಳ ಕೆಲವೇ ಕೆಲವು ಕಲಾವಿದರ ಭಾಗವಾಗಿ ಉಳಿದಿಲ್ಲ. ವಿಶ್ವಪ್ರಜ್ಞೆಯಾಗಿ ಬೆಳೆದಿದೆ. ಜಾನಪದ ಬೇರು, ಶಿಷ್ಟ ಸಾಹಿತ್ಯ ಹೂವಿದ್ದ ಹಾಗೆ. ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಜಾನಪದ ಬೇರು. ಜಾನಪದ ವಿಶ್ವಸ್ವರೂಪಿ. ಎಲ್ಲರ ಮೈಮನಗಳಲ್ಲಿ, ರಕ್ತದ ಧಮನಿ ಧಮನಿಗಳಲ್ಲಿ ಹಾಸುಹೊಕ್ಕಾಗಿದೆ ಎಂದರು. ಜಾಗತಿಕ ಮಟ್ಟದಲ್ಲಿ ಅನೇಕ ವಿದ್ಯಾಮಾನಗಳು ನಡೆಯುತ್ತಿವೆ. ಭಯೋತ್ಪಾದನೆ ಅಧಿಕಗೊಳ್ಳುತ್ತಿದೆ. ಬೇರೆ ಸಂಸ್ಕೃತಿ ಹೆಚ್ಚುತ್ತಿದೆ. ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ನಾವು ಜಾನಪದವನ್ನು ವಿಶೇಷವಾದ ವಿಷಯವಾಗಿ ಅಧ್ಯಯನ ಮಾಡುತ್ತಿದ್ದೇವೆ. ಅನೇಕವಾದ ಕಲಾಪ್ರಕಾರಗಳು ಸೇರಿಕೊಂಡಿವೆ. ಜಾನಪದ ಅಧ್ಯಯನವೆಂದರೆ ಮೂಲ ಸಂಸ್ಕೃತಿಯ ಅಧ್ಯಯನ. ಜನಪದ ಸಂಸ್ಕೃತಿಯ ಅಧ್ಯಯನವಾಗಿದೆ. ಈ ವಿಶ್ವಗೊಂಬೆಯಾಟದ ದಿನಾಚರಣೆ ಎಲ್ಲ ಒಡಕುಗಳಿಗೆ, ಎಲ್ಲ ಭೇದ ಸಂಸ್ಕೃತಿಗೆ ಒಂದು ಒಳ್ಳೆಯ ಸಲಹೆ ಕೊಡುವ ಕ್ಷೇತ್ರವಾಗಿ ಕಾಣಿಸುತ್ತಿದೆ. ಸಾಮಾಜಿಕ, ಆರ್ಥಿಕ,ಸಾಂಸ್ಕೃತಿಕ ಭೇದ ಸಂಸ್ಕೃತಿಯನ್ನು ತೊಡೆದು ಭಾವೈಕ್ಯತೆಯನ್ನು ನಿರ್ಮಿಸುವ ಶಕ್ತಿ ಜಾನಪದಕ್ಕಿದೆ. ಸ್ವಾತಂತ್ರ್ಯ ಬಂದು 70ವರ್ಷ ಕಳೆದರೂ ಜಾತಿ-ಮತಗಳ ಭೇದ ಕಡಿಮೆಯಾಗಿಲ್ಲ. ಜಾತಿ ಪ್ರಜ್ಞೆ ಅಧಿಕಗೊಳ್ಳುತ್ತಿದೆ. ಜಾನಪದ ಜಾತ್ರೆ, ಆಚರಣೆ, ಸಂಸ್ಕೃತಿಗಳು ಸಾಮಾಜಿಕ,ಆರ್ಥಿಕ,ಸಾಂಸ್ಕೃತಿಕ ಭೇದ ತೊರೆದು ಸಮಸಮಾಜ ನಿರ್ಮಾಣ ಮಾಡುತ್ತವೆ. ಜಾನಪದ ಜೀವರಕ್ಷಕ ಸಂಸ್ಕೃತಿಯಾಗಿದೆಯೇ ವಿನಃ ಜೀವವಿನಾಶಕ ಸಂಸ್ಕೃತಿಯಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿವೇದಿತಾ ವಿ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ.ಬಿ.ಟಿ.ಬಾಣೇಗೌಡ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಸಂಚಾಲಕರಾದ ಡಾ.ಕನಕತಾರ, ಗಣೇಶ ಕುಮಾರಸ್ವಾಮಿ, ಕನ್ನಡ ಜಾನಪದ ಪರಿಷತ್ ಚಾಮರಾಜಕ್ಷೇತ್ರದ ಅಧ್ಯಕ್ಷೆ ರಾಣಿಪ್ರಭಾ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಚ್)

Leave a Reply

comments

Related Articles

error: