ಮೈಸೂರು

ಟಿಪ್ಪು ಸಾಮಾಜಿಕ ಸ್ತರದಲ್ಲಿ ಸಮಾನತೆ ಸಾಕ್ಷೀಕರಿಸುವ ಹಿಂದೂ ಪ್ರತಿನಿಧಿ : ಭಗವಾನ್ ಬಣ್ಣನೆ

ಟಿಪ್ಪು ರೈತರ ಹಾಗೂ ಜನಪರ ಕಾಳಜಿಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದ ಎಂದು ಚಿಂತಕ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ದಲಿತ ವೆಲ್ ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾದ ಟಿಪ್ಪು-ಸುಲ್ತಾನ್ ಒಂದು ವಿವೇಚನೆ ಕುರಿತ ವಿಚಾರ ಸಂಕಿರಣವನ್ನುಕೆ.ಎಸ್.ಭಗವಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರೈತರಲ್ಲಿ ಮತಾಂಧ ಭಾವನೆಯನ್ನು ಮೂಡಿಸುವ ಉದ್ದೇಶ ಟಿಪ್ಪುವಿಗಿರಲಿಲ್ಲ. ಸಂಕುಚಿತ ಭಾವನೆಯೂ ಇರಲಿಲ್ಲ. ಅದಕ್ಕಾಗಿಯೇ ರೈತರು ಅವನ ಮೇಲೆ ಜನಪದ ಹಾಡುಗಳನ್ನು ಬರೆದರು. ಆತ ಸಾಮಾಜಿಕ ಸ್ತರದಲ್ಲಿ ಸಮಾನತೆಯನ್ನು ಸಾಕ್ಷೀಕರಿಸುವ ಹಿಂದೂ ಪ್ರತಿನಿಧಿಯಾಗಿದ್ದ ಎಂದು ಬಣ್ಣಿಸಿದರು.

ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸಲು ಆರಂಭಿಸುವ ಪ್ರಸ್ತಾಪ ಆದಾಗಿನಿಂದಲೂ ಅಪಾರ್ಥಗಳೇ ಕೇಳಿ ಬರುತ್ತಿವೆ. ಅವೆಲ್ಲ ಉದ್ದೇಶಪೂರ್ವಕವಾಗಿಯೇ ಮೂಡಿಸುತ್ತಿರುವ ತಪ್ಪು ಕಲ್ಪನೆಯಾಗಿದೆ. ಆತ ತಪ್ಪಿತಸ್ತರನ್ನು ಮಾತ್ರ ಶಿಕ್ಷಿಸುತ್ತಿದ್ದ. ಆದರೆ ಎಂದಿಗೂ ಆತ ಮತಾಂಧನಾಗಿರಲಿಲ್ಲ. ಆತ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣದಲ್ಲಿ ಹಿಂದುಗಳೇ ಇರುತ್ತಿರಲಿಲ್ಲ. ಎಲ್ಲಾ ಧರ್ಮವನ್ನೂ ಸಮಾನತೆಯಿಂದ ಕಾಣುತ್ತಿದ್ದ. ರಾಜ್ಯವನ್ನು ವಿಸ್ತರಿಸಿದ ಕೀರ್ತಿ ಅವನಿಗೇ ಸಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಹಾರೋಹಳ್ಳಿ ರವೀಂದ್ರ ಅವರು ಬರೆದ ‘ಎಬಿವಿಪಿ ಭಯೋತ್ಪಾದನೆ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ವೇದಿಕೆಯಲ್ಲಿ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮೈಸೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಚಂದ್ರಶೇಖರ್, ಚಿಂತಕ ಮತ್ತು ಸಾಹಿತಿ ಪ್ರೊ.ಸಬೀರ್ ಮುಸ್ತಾಫಾ, ಸಾಹಿತಿ ಬನ್ನೂರು ಕೆ.ರಾಜು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: