Uncategorized

ಸಂತ್ರಸ್ಥ ಕಾರ್ಮಿಕರ ಪರಿಹಾರಕ್ಕೆ ಒತ್ತಾಯ : ಝಾಂಡಾ ಹೂಡಿ ಪ್ರತಿಭಟನೆಯ ಎಚ್ಚರಿಕೆ

ಮೈಸೂರು, ಮಾ.21 : ಬಂದ್ ಆಗಿರುವ ನಗರದ ಕೆ.ಆರ್. ಮಿಲ್ ಸಂತ್ರಸ್ತ ಕಾರ್ಮಿಕರ ಕುಟುಂಬದವರಿಗೆ ನ್ಯಾಯಾಲಯ ಆದೇಶದನ್ವಯ 30 ದಿನಗಳ ಒಳಗೆ ಪರಿಹಾರ ದೊರಕಿಸಿಕೊಡದಿದ್ದಲ್ಲಿ ಕಾರ್ಖಾನೆ ಎದುರು ರಸ್ತೆ ತಡೆ, ಝಾಂಡಾ ಹೂಡಿ ಪ್ರತಿಭಟಿಸುವುದರ ಜೊತೆಗೆ, ಕಾರ್ಖಾನೆಗೆ ಸೇರಿದ ಜಾಗಗಳಲ್ಲಿ ಗುಡಿಸಲು ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಕೆ.ಆರ್. ಮಿಲ್ ಸಾಮಾನ್ಯ ನೌಕರರ ಸಂಘ ಎಚ್ಚರಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕೆಂಚಪ್ಪ, ಈ ಹಿಂದೆ ಕಾರ್ಖಾನೆ ಮುಚ್ಚಿದಾಗ ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ನೀಡಬೇಕಾದ ಹಣ ನೀಡದಿದ್ದಾಗ ನ್ಯಾಯಾಲಯಗಳು ಅದನ್ನು ಪಾವತಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದ್ದವು.

ಬಳಿಕ ಲಿಕ್ವಿಡೇಟರ್ ಅವರನ್ನೂ ನೇಮಕ ಮಾಡಿದ್ದು, ಕಾರ್ಮಿಕರಿಗೆ ದೊರಕಬೇಕಾದ ಹಣ ಈಗ ಅವರ ಬಳಿಯೇ ಇದ್ದು, ಕಾರ್ಮಿಕರು ಸೂಕ್ತ ರೀತಿ ಹೋರಾಟ ನಡೆಸಲು ಸಾಧ್ಯವಾಗದ ಕಾರಣದಿಂದಾಗಿ ಹಣ ಕೈತಪ್ಪುತ್ತಿದೆ.

ಜೊತೆಗೆ, ಕಾರ್ಖಾನೆಯ ಈ ಹಿಂದಿನ ನೂರಾರು ಕಾರ್ಮಿಕರು ಈಗಾಗಲೇ ಮೃತಪಟ್ಟಿದ್ದು, ಇರುವವರು ವೃದ್ಧಾಪ್ಯದಲ್ಲಿದ್ದಾರೆ. ಹೀಗಾಗಿ ಇವರಿಗೆ ವಕೀಲರನ್ನು ಇರಿಸಿಕೊಳ್ಳುವುದು, ಬೆಂಗಳೂರಿಗೆ ಅಲೆಯುವುದು ಅಸಾಧ್ಯವಾದ ಕಾರಣ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಮೊದಲಾದವರು ಕ್ರಮ ಕೈಗೊಳ್ಳಬೇಕು.

ಈಗಾಗಲೇ ಹಲವರು ಕಾರ್ಖಾನೆಗೆ ಸೇರಿದ ಆಸ್ತಿ ತಮ್ಮದೆನ್ನುತ್ತಿರುವುದರಿಂದ ಅವುಗಳ ರಕ್ಷಣೆ ಸಹಾ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ವೈ. ರಘು, ಹನುಮಂತು, ಪುಟ್ಟಸ್ವಾಮಿ, ನಾಗರಾಜು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: