ಮೈಸೂರು

ಕಂದಾಯ ಅದಾಲತ್ : 349 ಆರ್.ಟಿ.ಸಿ ತಿದ್ದುಪಡಿಗೆ ಬಾಕಿ ಉಳಿದಿದೆ; ಆನಂದ

ಹುಲ್ಲಹಳ್ಳಿ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ನಡೆದ ಮೊದಲ ಹಂತದ ಕಂದಾಯ ಅದಾಲತ್ ನಲ್ಲಿ 204 ಆರ್.ಟಿ.ಸಿಗಳನ್ನು ರೈತರಿಗೆ ವಿತರಿಸಲಾಗಿತ್ತು. ಈಗ 289 ತಿದ್ದುಪಡಿ ಪ್ರಕರಣಗಳು ಬಂದಿದ್ದು, ಒಟ್ಟು 493 ಆರ್.ಟಿ.ಸಿ.ತಿದ್ದುಪಡಿ ಪೈಕಿ 349 ಬಾಕಿ ಉಳಿದಿವೆ ಎಂದು ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್.ಆನಂದ ತಿಳಿಸಿದರು.

ನಂಜನಗೂಡು ತಾಲೂಕು ಹುಲ್ಲಹಳ್ಳಿಯಲ್ಲಿ ನಡೆದ ಕಂದಾಯ ಅದಾಲತ್ ನಲ್ಲಿ ಪಾಲ್ಗೊಂಡ ಉಪವಿಭಾಗಾಧಿಕಾರಿ ಸಿ.ಎಲ್.ಆನಂದ  ಮಾತನಾಡಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಕಂದಾಯ ಅದಾಲತ್ ಅನುಕೂಲವಾಗಿದೆ.  1500 ಪೋಡಿ ಆರ್.ಟಿ.ಸಿಗಳನ್ನು ರೈತರಿಗೆ ವಿತರಣೆ ಮಾಡಲಾಯಿತು. ಹಿಂದೆ ರೈತರು ಪೋಡಿ ಆರ್.ಟಿ.ಸಿ ಪಡೆಯಲು ಹಣ ಪಾವತಿಸಿ ದೀರ್ಘಕಾಲ ಕಾಯಬೇಕಾಗಿತ್ತು. ಈಗ ರಾಜ್ಯ ಸರ್ಕಾರ ಉಚಿತವಾಗಿ ರೈತರಿಗೆ ಒದಗಿಸುವ ವ್ಯವಸ್ಥೆ ಮಾಡಿದೆ ಎಂದರು.

ಸ್ವಯಂಪ್ರೇರಣೆಯಿಂದ 700 ಆರ್.ಟಿ.ಸಿ. ತಿದ್ದುಪಡಿ ಪ್ರಕರಣಗಳನ್ನು ದಾಖಲಿಸಿಕೊಂಡು ತಿದ್ದುಪಡಿ ಮಾಡಿ ರೈತರಿಗೆ ವಿತರಿಸಲಾಯಿತು. ವಿವಿಧ ಪ್ರಕರಣಗಳಲ್ಲಿ ಸುಮಾರು 2000ರೈತರಿಗೆ ಅನುಕೂಲವಾಗಿದೆ. ನಂಜನಗೂಡಿನ 5 ಹಾಡಿಗಳ ಸುಮಾರು 124 ಸೋಲಿಗರು ಹಾಗೂ ಜೇನುಕುರುಬರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲಾಗಿದೆ.

ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಸರ್ಕಾರಿ ಕೆರೆ,ಕಟ್ಟೆ,ತೋಪು, ಹುಲ್ಲುಬನ್ನಿ, ಗೋಮಾಳ ಜಮೀನುಗಳು ಇವೆ ಈ ಜಮೀನುಗಳಲ್ಲಿ ದರಕಾಸ್ತು, ಎಲ್.ಆರ್.ಎಫ್, ಇನಾಂ ಇತ್ಯಾದಿ ಮಂಜೂರಾತಿಗಳ ಕಾರಣ ಬಹುಸಂಖ್ಯೆಯಲ್ಲಿ ಪಹಣಿಗಳು ಬಂದಿವೆ ಎಂದರು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಸೌಲಭ್ಯ ಯೋಜನೆಗಳಾದ ಎಸ್.ಎಸ್.ವೈ ಯೋಜನೆಯಡಿ 44, ಒ.ಎ.ಪಿ ಅಡಿಯಲ್ಲಿ 7, ಪಿ.ಎಚ್.ಪಿ ಅಡಿಯಲ್ಲಿ 1, ಮನಸ್ವಿನಿ ಅಡಿಯಲ್ಲಿ 2 ಡಿ.ಡಬ್ಲ್ಯೂ.ಪಿ ಅಡಿಯಲ್ಲಿ 13 ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

ಈ ಸಂದರ್ಭ ನಂಜನಗೂಡು ತಹಶೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: