ಮೈಸೂರು

ಬದುಕಿನ ತಲ್ಲಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ‘ಅರುಂಧತಿ ಆಲಾಪ’

boomigeetha-1ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಿರ್ದೇಶನದ ‘ಅರುಂಧತಿ ಆಲಾಪ’ ಭಾನುವಾರದಂದು ಸಂಜೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಕೊಡಗಿನ ರಂಗಭೂಮಿ ಪ್ರತಿಷ್ಠಾನದ ವತಿಯಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಅರುಂಧತಿ ಆಲಾಪ ವಾಸ್ತವದ ನೆಲಗಟ್ಟಿನ ಸರಳ ನೇರ ಕಥೆಯಾದರೂ ನಾಟಕವಾಗಿ ರೂಪಗೊಳ್ಳುವಲ್ಲಿ ಬದುಕಿನ ಎಲ್ಲ ಸಂರ್ಕೀಣತೆಗಳನ್ನು ಒಳಗೊಂಡಿದೆ. ಕನಸುಗಳ ಮೇಲೆ ರೂಪುಗೊಂಡಿರುವ ಈ ನಾಟಕ ಹೆಣ್ಣೊಬ್ಬಳ ಕನಸಿನ, ಆಕೆ ಬಯಸುವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮನೋಜ್ಞವಾಗಿ ಮಾಡಿದೆ.

ಈ ನಾಟಕದ ನಾಯಕಿ ಅರುಂಧತಿ ಮಧ್ಯ ವಯಸ್ಕ ಮಹಿಳೆ. ಬದುಕಲ್ಲಿ ತಂದಿಟ್ಟ ತಲ್ಲಣಗಳ ನರಕಯಾತನೆಯಲ್ಲಿ ಆಕೆಯ ಹರೆಯವೆಲ್ಲ ಕಳೆದು ಹೋಗಿದೆ. ಕ್ರೌರ್ಯದ ಅಟ್ಟಹಾಸ ಮೆರೆದ ಗಂಡ ಸತ್ತು ಮಣ್ಣಲ್ಲಿ ಮಣ್ಣಾಗಿದ್ದರೆ, ದುರ್ವರ್ತನೆಯನ್ನೇ ಬದುಕಾಗಿಸಿಕೊಂಡ ಮಗ ದೂರವಾಗುತ್ತಾನೆ. ಆಗ ಅವಳಿಗೆ ಯೌವನದ ಪ್ರಿಯಕರ ನೆನಪಾಗುತ್ತಾನೆ. ಅವನೊಂದಿಗೆ ಹೊಸ ಬದುಕಿನ ಕನಸು ಅವಳಲ್ಲಿ ಚಿಗುರೊಡೆಯುತ್ತಿದೆ.

ಪ್ರಿಯಕರ ಚಿದಂಬರನೊಂದಿಗೆ ಅರುಂಧತಿ ದಿನ ಕಳೆಯುತ್ತಿದ್ದಾಗ ಒಂದು ದಿನ ಮಗ ಅಚ್ಯುತನ ಆಗಮವಾಗುತ್ತದೆ. ಅಮ್ಮ ಅರುಂಧತಿ ಪ್ರಿಯಕರನೊಂದಿಗೆ ಇರುವುದು ಗೆಳೆಯರ ಮೂಲಕ ಆತನಿಗೆ ತಿಳಿಯುತ್ತದೆ. ಇದರಿಂದ ಆಕ್ರೋಶಗೊಂಡ ಆತ ಅರುಂಧತಿಯೊಂದಿಗೆ ಗಲಾಟೆ ಮಾಡುತ್ತಾನೆ. ಕೊನೆಗೆ ಎಲ್ಲ ಸಂಕಷ್ಟಗಳಿಂದ ಪಾರಾದ ಅರುಂಧತಿ –ಚಿದಂಬರ ಜೋಡಿಗೆ ಹೊಸ ಬಾಳು ಕಟ್ಟಿಕೊಳ್ಳುವುದರೊಂದಿಗೆ ಕಥೆ ಸುಖಾಂತ್ಯ ಕಾಣುತ್ತದೆ.

ಅರುಂಧತಿಯಾಗಿ ಅನಿತಾ ಕಾರ್ಯಪ್ಪ, ಚಿದಂಬರನಾಗಿ ರಮೇಶ್ ಚಿಕ್ಕಮಗಳೂರು, ಅಚ್ಯುತನಾಗಿ ರಿಕಿನ್ ಉತ್ತಪ್ಪ, ಕನಕಳಾಗಿ ಭಾಗ್ಯಶ್ರೀ ಅಭಿನಯಿಸಿದರು.

Leave a Reply

comments

Related Articles

error: