ಮೈಸೂರು

ಕಾಯಕದ ಮೂಲಕವೇ ಸಮಾಜದಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಿದವರು ವಚನಕಾರರು : ಪರಮಶಿವ ನಡುಬೆಟ್ಟ

ಮೈಸೂರು,ಮಾ.22:- ತಮ್ಮ ಕಾಯಕದ ಮೂಲಕವೇ ಸಮಾಜದಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಿದವರು ವಚನಕಾರರು ಎಂದು ಸಾಹಿತಿ ಪರಮಶಿವ ನಡುಬೆಟ್ಟ ಬಣ್ಣಿಸಿದರು.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ದಲಿತ ವಚನಕಾರರ ಜಯಂತ್ಯೋತ್ಸವ ಸಮಿತಿ ವತಿಯಿಂದ ಮೈಸೂರು ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿಂದು ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಹೊಡಯುಗವನ್ನೇ ಕಂಡಿದ್ದು 12ನೇ ಶತಮಾನದಲ್ಲಿ ವೇದ ಉಪನಿಷತ್ತುಗಳ ಕಾಲದಲ್ಲಿ ವರ್ಗಗಳನ್ನು ಕಾಣುತ್ತಿದ್ದೆವು. 12ನೇ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಗುರುತಿಸುತ್ತ, ಮನುಷ್ಯ ಸಂಬಂಧಗಳನ್ನು ಕಟ್ಟಿಕೊಳ್ಳತಕ್ಕ ಪ್ರಯತ್ನ ಮಾಡಲಾಗಿದೆ. ಹಲವಾರು ವಚನಕಾರರಿದ್ದರು. ದಲಿತ ವಚನಕಾರರು ಬೆಳೆದುಬಂದರು. ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ  ಅವರನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಇವರೆಲ್ಲ ತಮ್ಮ ಕಾಯಕದ ಮೂಲಕ ಸಮಾಜದ ಮೇಲೆ, ಜನರಲ್ಲಿ ಬೆಳಕು  ಚೆಲ್ಲಿದರು. ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಕಾಯಕವೇ ದೇವರು, ಅದೇ ನನ್ನ ಲಿಂಗ, ಅದೇ ನನ್ನ ಜಂಗಮ ಎಂದುಕೊಂಡು ಬಂದರು. ಕಂಬಳಿ ನಾಗಿದೇವ ಬಸವಣ್ಣನವರ ಪ್ರೀತಿಗೆ ಪಾತ್ರರಾದರು ಚನ್ನರಾಮೇಶ್ವರ ಅಂಕಿತದಲ್ಲಿ ವಚನಗಳನ್ನು ಬರೆದರು. ನಾವು ಈಗ ಕಂಪ್ಯೂಟರ್ ಯುಗದಲ್ಲಿದ್ದೇವೆ. ವಿಜ್ಞಾನ ಬೆಳಕು ಚೆಲ್ಲುತ್ತಿದೆ. ರೋಬೋಟ್ ಬಳಿ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಅಜ್ಞಾನವಾಗಲಿ, ಸಣ್ಣತನಗಳಾಗಲೀ ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ದಲಿತ ವಚನಕಾರರ ಭಾವಚಿತ್ರಗಳಿಗೆ ಪುಷ್ಪನಮನಗೈಯ್ಯಲಾಯಿತು.

ಈ ಬಸಂದರ್ಭ ಮೇಯರ್ ಬಿ.ಭಾಗ್ಯವತಿ, ವೇಣುಗೋಪಾಲ ತಾಯೂರು ವಿಠಲಮೂರ್ತಿ, ಪುಟ್ಟಸಿದ್ದಯ್ಯ, ಮೂಗೂರು ನಂಜುಂಡಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಚ್)

Leave a Reply

comments

Related Articles

error: