
ಕರ್ನಾಟಕಪ್ರಮುಖ ಸುದ್ದಿಮೈಸೂರು
ಮೀಸಲಾತಿಗೆ ಧಕ್ಕೆಯಾಗದಂತೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಗೋ.ಮಧುಸೂದನ್ ಒತ್ತಾಯ
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ
ಮೈಸೂರು, ಮಾ.22: ದೇಶದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳಾಗಿದ್ದು, ಮುಸಲ್ಮಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್ಖ್ ಮತಗಳಿಗೆ ನೀಡಿರುವ ಅಲ್ಪಸಂಖ್ಯಾತ ಸ್ಥಾನಮಾನ ರದ್ದುಗೊಳಿಸಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಪತ್ರದ ಪ್ರತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿನ ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿದರೆ ಉಳಿದೆಲ್ಲರ ವಂಶವಾಹಿ ಈ ದೇಶದ ಬಹು ಸಂಖ್ಯಾತರ ವಂಶವಾಹಿಗಳೊಂದಿಗೆ ಹೊಂದಾಣಿಕೆ ಆಗುತ್ತದೆ. ಜೊತೆಗೆ ಇವರ ಅನೇಕ ಆಚಾರ ವಿಚಾರ ಪದ್ಧತಿಗಳು, ಮೂಲಗಳೂ ಹಿಂದೂ ಧರ್ಮವವನ್ನೇ ಅವಲಂಬಿಸಿದೆ. ದೇಶವನ್ನು ಒಡೆದು ಆಳಲು ಬ್ರಿಟಿಷರು ಅಲ್ಪಸಂಖ್ಯಾತ ಪದ್ಧತಿ ಜಾರಿಗೊಳಿಸಿದ್ದರು. ಇಂದೂ ಅದನ್ನು ಮುಂದುವರಿಸುವುದು ಸರಿಯಲ್ಲ ಎಂದರು.
ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲಿ:
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿದಲ್ಲಿ ಮುಂದೊಂದು ದಿನ ದೇಶದ ಸಣ್ಣಪುಟ್ಟ ಸಮುದಾಯಗಳೂ ಅತಾರ್ಕಿಕ, ಅವಾಸ್ತವಿಕ ಕಾರಣ ಮುಂದೊಡ್ಡಿ ಅಲ್ಪಸಂಖ್ಯಾತ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವುದು ತಪ್ಪುತ್ತದೆ. ಜೊತೆಗೆ ಈ ರೀತಿಯ ಮಾನ್ಯತೆಗಳಿಂದಾಗಿ ಆಂತರಿಕ ಕಿತ್ತಾಟ, ಅನಾರೋಗ್ಯಪೂರ್ಣ ಸ್ಪರ್ಧೆ, ಪ್ರತಿ ಚುನಾವಣೆಯಲ್ಲೂ ಸುಳ್ಳು ಭರವಸೆ ನೀಡುವುದು, ನಿಶ್ಚಿತ ಜಾತಿ-ಸಮುದಾಯಗಳನ್ನು ಓಲೈಸಲು ಅನರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಗೋ.ಮಧುಸೂದನ್ ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆ ಕುರಿತಂತೆ ಮಾತನಾಡಿದ ಅವರು, ಈ ಹಿಂದೆ ವೀರಶೈವರು, ಲಿಂಗಾಯತರು ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದಾಗ, ವೀರಶೈವರ ಆಚಾರ ವಿಚಾರ ಪದ್ಧತಿಗಳು ಹಿಂದೂ ಧರ್ಮವೇ ಆಗಿದೆಯೆಂಬ ಕಾರಣದಿಂದ ಅದನ್ನು ತಿರಸ್ಕರಿಸಲಾಗಿತ್ತು. ಆದ್ದರಿಂದ ಈಗ ಶೈವರನ್ನು ಹೊರಗಿಟ್ಟು ಪ್ರತ್ಯೇಕ ಧರ್ಮ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಮತ್ತಷ್ಟು ಒಡಕಿಗೆ ಕಾರಣವಾಗಬಹುದು:
ಇದೇ ಪದ್ಧತಿ ಮುಂದುವರಿದಲ್ಲಿ ತಾವು ವೇದ ಒಪ್ಪುವುದಿಲ್ಲ ಎಂಬ ರೀತಿಯ ಕಾರಣ ನೀಡಿ ಪ್ರತ್ಯೇಕ ಧರ್ಮದ ಮಾನ್ಯತೆ ಬೇಡುತ್ತ ಮತ್ತಷ್ಟು ಒಡಕಿನತ್ತ ಸಮುದಾಗಳು ಹೆಜ್ಜೆ ಇಡಬಹುದು. ಶತಮಾನಗಳ ಹಿಂದೆ ಬ್ರಿಟಿಷರು ಮಾಡಿದ ಅಪಪ್ರಚಾರವನ್ನು ಮತ್ತು ಕುತಂತ್ರವನ್ನು ನಿರಸ್ತಗೊಳಿ “ವಸುಧೈವ ಕುಟುಂಬಕಂ’ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಬಹುದಾಗಿದೆ ಎಂದು ಮನವಿ ಮಾಡಿದರು.
ಢೋಂಗೀ ಜಾತ್ಯತೀತವಾದ ಮತ್ತು ಕುತ್ಸಿತ ಕೋಮುವಾದಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಕಂಡ ಕನಸಿನಂತೆ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯ ಹಲವಾರು ಬಾರಿ ನೀಡಿರುವ ನಿರ್ದೇಶನದಂತೆ ಈಗ ಚಾಲ್ತಿಯಲ್ಲಿರುವ ಯಾವುದೇ ಮೀಸಲಾತಿಗೆ ಧಕ್ಕೆ ಬಾರದಂತೆ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ತರುವುದರೊಂದಿಗೆ ಒಂದೇ ದೇಶ-ಒಂದೇ ಕಾನೂನು ಜಾರಿಗೊಳಿಸಿ ಇಲ್ಲವಾದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ದೇಶವು ಛಿದ್ರವಾಗುವುದು ಎಂದು ನುಡಿದರು.
ಸಮಾನ ನಾಗರಿಕ ಸಂಹಿತೆ ಈಗಾಗಲೇ ಆಸ್ಟ್ರೇಲಿಯಾ ಮತ್ತು ರಷ್ಯಾದಲ್ಲಿರುವಾಗ ಮೋದಿ ಅವರೂ ಅದನ್ನು ಭಾರತದಲ್ಲಿಯೂ ಜಾರಿಗೆ ತರುವ ದಿಟ್ಟತನವನ್ನು ಪ್ರಧಾನಿ ನರೇಂದ್ರ ಮೋದಿಗಳು ತೋರಬೇಕೆಂದು ಮನವಿ ಮಾಡಿದರು.
ದೇಶದ ಸಾಮಾನ್ಯ ನಾಗರೀಕನಾಗಿ ಪ್ರಧಾನಿಗಳಿಗೆ ಪತ್ರ ಬರೆಯಲಾಗಿದ್ದು, ಪತ್ರಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿ ಪತ್ರವನ್ನು ಇಂದು ಬೆಳಗ್ಗೆ ರವಾನಿಸಲಾಗಿದೆ ಎಂದು ತಿಳಿಸಿದರು.(ವರದಿ:ಕೆಎಂಆರ್)