
ಮೈಸೂರು,ಮಾ.22 : ಮಾಂಸಖಂಡದ ದೌರ್ಬಲ್ಯದಿಂದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ರೋಗಿಗೆ ನಗರದ ಮಾನಸ ಪರ್ವ ಆಸ್ಪತ್ರೆಯ ವೈದ್ಯರು ಕೀಲುಮೂಳೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅಭೂತಪೂರ್ವ ಯಶಸ್ವಿ ಸಾಧಿಸಿದ್ದು ಇದೊಂದು ಮೈಲಿಗಲ್ಲು ಶಸ್ತ್ರಚಿಕಿತ್ಸೆ ಎಂದು ಹಿರಿಯ ವೈದ್ಯರಾದ ಡಾ.ಟಿ.ಮಂಜುನಾಥ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಹುಣಸೂರು ತಾಲ್ಲೂಕಿನ ಹಿಂದಾಗುಡ್ಲು ಗ್ರಾಮದ 25 ವರ್ಷದ ಮಹದೇವ ಎಂಬಾತ ಹುಟ್ಟಿನಿಂದ ಮಾಂಸಖಂಡ ದೌರ್ಬಲ್ಯದಿಂದ ಬಳಲುತ್ತಿದ್ದ, ರೋಗದ ತೀವ್ರತೆಯಿಂದ ನಡೆಯಲು ಸಾಧ್ಯವಿಲ್ಲದ ಸಮಸ್ಯೆ ಎದುರಿಸುತ್ತಿದ್ದ, ಅವನಿಗೆ ರಷ್ಯಾದ ಇಲಿಜರೋವ್ ಅವರ ವೃತ್ತಾಕಾರದ ಬಾಹ್ಯಬಂಧನ ಬಳಸಿ ಮಾಡಿದ ಚಿಕಿತ್ಸಾ ಪದ್ಧತಿಯು ತೀವ್ರ ಪರಿಣಾಮ ಬೀರಿದ್ದು ಇಂದು ರೋಗಿಯೂ ಸಂಪೂರ್ಣ ಗುಣಮುಖರಾಗಿದ್ದಾರೆಂದು ರೋಗಿಯನ್ನು ಪರಿಚಯಿಸಿದರು.
ಮಾನಸ ಆಸ್ಪತ್ರೆಯ ವೈದ್ಯರಾದ ಡಾ.ರಘುನಂದನ ಅವರು ಶೇ.180 ಡಿಗ್ರಿಯಷ್ಟು ಡೊಂಕಾಗಿದ್ದ ಮಹದೇವ ಅವರ ಎಡಗಾಲಿನ ಪಾದಕ್ಕೆ ಶಸ್ತ್ರ ಚಿಕಿತ್ಸೆ ಹಾಗೂ ಬಾಹ್ಯ ಬಂಧನ ಚಿಕಿತ್ಸೆ ಮಾಡಿದ್ದು, ಕಾಲು ಸಹಜ ಸ್ಥಿತಿಯಲಿದೆ. ರೋಗಿ ಇಂದು ಸ್ವತಂತ್ರವಾಗಿ ಓಡಾಡುತ್ತಿದ್ದಾನೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೊಂದು ಕಾಲಿಗೂ ಚಿಕಿತ್ಸೆ ಮಾಡಿ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಏಕ್ಸರೇ, ರಿಯಾಯಿತಿ ದರದಲ್ಲಿ ಔಷಧಿ, ರಕ್ತ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾದ ಮಹದೇವ್ ಹಾಗೂ ಡಾ.ರಘುನಂದನ ಇದ್ದರು. (ವರದಿ : ಕೆ.ಎಂ.ಆರ್)