ಮೈಸೂರು

ಮನುಷ್ಯ ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಸಾವು ಏಕೆ ಬರುತ್ತದೆ ಎಂಬುದನ್ನು ಅರಿತುಕೊಳ್ಳಲು ತತ್ವಶಾಸ್ತ್ರ ಅಭ್ಯಸಿಸಿದೆ : ಡಾ.ಎಸ್.ಎಲ್.ಭೈರಪ್ಪ

ಮೈಸೂರು,ಮಾ.22:- ಸಾವು ಎಂದರೇನು? ಮನುಷ್ಯ ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಸಾವು ಏಕೆ ಬರುತ್ತದೆ? ಎಂಬುದನ್ನು ಅರಿತುಕೊಳ್ಳುವ ಸಲುವಾಗಿ ನಾನು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದೆ ಎಂದು ಖ್ಯಾತ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ತಿಳಿಸಿದರು.

ಮಾನಸಗಂಗೋತ್ರಿಯಲ್ಲಿರುವ ಇ.ಎಂ.ಆರ್.ಸಿ. ಸಭಾಂಗಣದಲ್ಲಿಂದು ಮೈಸೂರು ವಿ.ವಿ.ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ 100 ವರ್ಷಗಳ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಕುರಿತು ಆಯೋಜಿಸಿದ್ದ 3 ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  ತಾವು ಹದಿ ಹರೆಯದ ವಯಸ್ಸಿನಲ್ಲಿದ್ದಾಗಲೇ ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಅಂದಿನ ಭೀಕರ ಕಾಯಿಲೆ ಪ್ಲೇಗ್ ರೋಗಕ್ಕೆ ಬಲಿಯಾದರು. ಈ ಘಟನೆ ನನ್ನ ಮನಸ್ಸಿನ ಮೇಲೆ ಒಂದು ರೀತಿಯ ವಿಚಿತ್ರ ಪರಿಣಾಮ ಬೀರಿದ್ದರಿಂದ ನಾನು ಸಾವು ಎಂದರೇನು ಅದು ಏಕೆ ಬರುತ್ತದೆ ಎಂಬುದನ್ನು ಅರಿಯುವ ಸಲುವಾಗಿ ತತ್ವಶಾಸ್ತ್ರ ಅಧ್ಯಯನಕ್ಕೆ ಮುಂದಾದೆ ಎಂದು ಹೇಳಿದರು.

ನಾನು ತತ್ವಶಾಸ್ತ್ರವನ್ನು ವ್ಯಾಸಂಗ ಮಾಡುವ ಸಂದರ್ಭದಲ್ಲಿ ನಾನು ಸೇರಿದಂತೆ ಕೇವಲ 3 ಮಂದಿ ಮಾತ್ರ ಇದ್ದೆವು. ಅಂದು ಈ ವಿಷಯದ ಉಪನ್ಯಾಸಕರಾಗಿದ್ದ ಯಮುನಾಚಾರ ಅವರು ಬಹಳ ಸೈದ್ಧಾಂತಿಕವಾಗಿ ತತ್ವಶಾಸ್ತ್ರವನ್ನು ಭೋದಿಸುವುದರೊಂದಿಗೆ ಅವರು ನನಗೆ “ಭಿತ್ತಿ” ಎಂಬ ಗ್ರಂಥವನ್ನು ಓದುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ನಾನು “ಭಿತ್ತಿ” ಗ್ರಂಥವನ್ನು ಓದಿ ತತ್ವಶಾಸ್ತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡೆ ಎಂದು ನುಡಿದರು. ಈ ಸಂದರ್ಭದಲ್ಲಿ ಮತ್ತೋರ್ವ ಉಪನ್ಯಾಸಕರು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರೆ ಜೀವನದಲ್ಲಿ ಯಾವ ಪ್ರಯೋಜನ, ಯಶಸ್ಸು ಕಾಣಲು ಸಾಧ್ಯವಿಲ್ಲ. ತತ್ವಶಾಸ್ತ್ರಕ್ಕೆ ಬದಲಾಗಿ ಬೇರೆ ವಿಷಯವನ್ನು ಅಧ್ಯಯನ ಮಾಡುವಂತೆ ನೀಡಿದ ಸಲಹೆಯನ್ನು ನಯವಾಗಿ ತಿರಸ್ಕರಿಸಿದ ನಾನು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿಯೇ ತೀರುತ್ತೇನೆ. ಒಂದು ವೇಳೆ ಇದರಿಂದ ನನಗೆ ಯಶಸ್ಸು ಸಿಗದಿದ್ದಲ್ಲಿ ನಾನು ಬೇಕರಿ ವೃತ್ತಿಯನ್ನು ಕೈಗೊಂಡು ನನ್ನ ಜೀವನವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಭೈರಪ್ಪನವರು ತತ್ವಶಾಸ್ತ್ರವನ್ನೇ ವ್ಯಾಸಂಗ ಮಾಡುವಂತೆ ಸಲಹೆ ನೀಡಿದ ಉಪನ್ಯಾಸಕಿ ಡಾ. ಹೆಚ್.ಟಿ.ಶಾಂತ ಹಾಗೂ ಇನ್ನಿತರರನ್ನು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ.ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು, ಮೈಸೂರು ವಿ.ವಿ.ಯ ಯು.ಪಿ.ಇ.ನಿರ್ದೇಶಕ ಪ್ರೊ.ಜಿ.ಹೇಮಂತ ಕುಮಾರ್, ಡಾ. ಎಸ್.ವೆಂಕಟೇಶ್, ಬಿ.ಎನ್.ಶೇಷಗಿರಿರಾವ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: