ಪ್ರಮುಖ ಸುದ್ದಿಮೈಸೂರು

ಕಾಳಧನಿಕರು, ಭ್ರಷ್ಟಾಚಾರಿಗಳಿಂದ ಆಕ್ರೋಶ್ ದಿನ ಆಚರಣೆ: ರಾಮದಾಸ್

ಮೈಸೂರಿನ ಜನತೆ ತಮ್ಮ ಜವಾಬ್ದಾರಿಗಳನ್ನು ಅರಿತು ಆಕ್ರೋಶ ದಿನಕ್ಕೆ ಬೆಂಬಲ ನೀಡದಿರುವುದನ್ನು ನಾನು ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಎಸ್‍.ಎ. ರಾಮದಾಸ್‍ ಹೇಳಿದರು.

ಆಗ್ರಹಾರದ ವಾಣಿವಿಲಾಸ ಮಾರುಕಟ್ಟೆಯಲ್ಲಿ ‘ಸಂಭ್ರಮ ದಿನ’ ಆಚರಿಸಿದ ರಾಮದಾಸ್ ವ್ಯಾಪಾರಿಗಳಿಗೆ ಗುಲಾಬಿ ಹೂವು ನೀಡಿ, ಸಿಹಿ ಹಂಚಿ ಅಭಿನಂದಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಯಾರು ಉಗ್ರ ಚಟುವಟಿಕೆಗಳನ್ನು ನಡೆಸಲು ಹಣ ಬಳಸುತ್ತಿದ್ದರೋ ಮತ್ತು ಕಾಳಧನ ಹೊಂದಿದ್ದರೋ ಅಂತಹವರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಾಮಾನ್ಯರು ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಹಣ ಮಾಡುತ್ತಿದ್ದವರು ನೋಟು ರದ್ದಿನಿಂದ ಕಂಗೆಟ್ಟಿದ್ದಾರೆ. ನಾವು ಕಷ್ಟ ಪಟ್ಟು ದುಡಿದ ಹಣ ನಮ್ಮಲ್ಲೇ ಇದೆ. ನಮಗ್ಯಾವ ತೊಂದರೆಯೂ ಇಲ್ಲ. ಮೋದಿ ಅವರು 500 ಮತ್ತು 1000 ರೂ. ನೋಟು ರದ್ದು ಮಾಡಿರುವುದು ನಮಗೆ ಖುಷಿ ತಂದಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ಹಂಚಿಕೊಂಡರೆಂದು ರಾಮದಾಸ್ ಹೇಳಿದರು.

ತಾವು ನ್ಯಾಯಯುತವಾಗಿ ದುಡಿದು ಪಡೆದ ಹಣವನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್‍ ಮುಂದೆ ಸಾಲುಗಟ್ಟಿ ನಿಂತ ಜನ ಮೋದಿ ಅವರ ಈ ದಿಟ್ಟ ನಡೆಯನ್ನು ಪ್ರಶಂಸಿಸಿದ್ದಾರೆ. ಭ್ರಷ್ಟಾಚಾರಿಗಳು ಮತ್ತು ಕಾಳಧನ ಹೊಂದಿರುವವರು ಮಾತ್ರ ನೋಟು ರದ್ದು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ಆಕ್ರೋಶ್ ದಿನಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ನೋಡಿದರೆ ಕರ್ನಾಟಕದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಜನಸಾಮಾನ್ಯರಿಗೆ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ನಾನು ದೇಶಭಕ್ತ: ಎಂ.ಕೆ. ಸೋಮಶೇಖರ್ ಅವರು ರಾಮದಾಸ್ ಮೇಲೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಸಿ, ನಾನು ದೇಶಭಕ್ತ. ನನ್ನ ತಂದೆ ಮಿಲಿಟರಿಯಲ್ಲಿ ಕಾರ್ಯನಿರ್ವಹಿಸಿದವರು. ನಾನು ದೇಶದ ಒಳಿತಿಗೆ ಏನು ಬೇಕಾದರೂ ಮಾಡಲು ಸಿದ್ಧ. ಅವರ ಹೇಳಿಕೆಗೆ ತಲೆಕೆಡಿಸಿಕೊಂಡಿಲ್ಲ. ಅವರ ವಿರುದ್ಧ ಈಗಾಗಲೇ ದಾವೆ ಹೂಡಿದ್ದೇವೆ ಎಂದರು.

Leave a Reply

comments

Related Articles

error: