ಕರ್ನಾಟಕ

ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರಿಲ್ಲವೆಂದು ನಗರ ಬಿಜೆಪಿಯಿಂದ ಪ್ರತಿಭಟನೆ

ಮಡಿಕೇರಿ,ಮಾ.22-ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಖಾಸಗಿ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದ ಸಂದರ್ಭ ನಗರ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಮತ್ತು ಉದ್ಘಾಟನೆಯ ಫಲಕದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಹೆಸರನ್ನು ಕೈಬಿಡಲಾಗಿದೆಯೆಂದು ಆರೋಪಿಸಿ ಬಿಜೆಪಿ ಪ್ರಮುಖರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಪರ ಜೈಕಾರ ಹಾಕಿದರು.

ಈ ಸಂದರ್ಭ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಘೋಷಣೆಗಳನ್ನು ಕೂಗಿ ಬಿಜೆಪಿ ಕ್ರಮವನ್ನು ಖಂಡಿಸಿದರು. ಪ್ರೊಟೋಕಾಲ್‍ನಂತೆ ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರ ಹೆಸರನ್ನು ಹಾಕಲಾಗಿದೆ. ಆದರೆ, ಶಾಸಕ ಕೆ.ಜಿ. ಬೋಪಯ್ಯ ಅವರು ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವುದರಿಂದ ಅವರ ಹೆಸರನ್ನು ಹಾಕಿರಲಿಲ್ಲವೆಂದು ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡರು. ಉಭಯ ಕಡೆ ಪರಸ್ಪರ ಘೋಷಣೆಗಳು ಮೊಳಗಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಪಡಿಸಿ ಹೊರ ಕಳುಹಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ.ಹರೀಶ್, ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಜಾಗ ಮಂಜೂರು ಮಾಡಿಸಲು ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಇಂದು ಉದ್ದೇಶ ಪೂರ್ವಕವಾಗಿ ಕೆ.ಜಿ. ಬೋಪಯ್ಯ ಅವರ ಹೆಸರನ್ನು ಕೈಬಿಡಲಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ತೆರಳುತ್ತಿರುವುದಾಗಿ ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಬಿಜೆಪಿ ಪ್ರಮುಖರಾದ ಮೋಹನ್ ಮೊಣ್ಣಪ್ಪ, ಉಮೇಶ್ ಸುಬ್ರಮಣಿ, ಎಸ್.ಸಿ. ಸತೀಶ್, ಬಿ.ಕೆ. ಜಗದೀಶ್, ಅರುಣ್ ಶೆಟ್ಟಿ ಮತ್ತಿತರರು ಹಾಜರಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: