ಮೈಸೂರು

ನೀರು ಬಿಡದಿದ್ದರೆ ಉಪವಾಸ ಸತ್ಯಾಗ್ರಹ; ಹಾರಂಗಿ ನಾಲೆ ಅಚ್ಚುಕಟ್ಟು ರೈತರ ಆಕ್ರೋಶ

ಬೈಲಕುಪ್ಪೆ: ಈಗಾಗಲೇ ನಮ್ಮ ಹಾರಂಗಿ ನಾಲೆ ಅಚ್ಚುಕಟ್ಟು ವ್ಯಾಪ್ತಿಗೆ ನೀರು ನಿಲ್ಲಿಸಿ 15 ದಿನಗಳಾಗಿದ್ದು, ಬೆಳೆಗೆ ಇನ್ನೂ ಒಂದು ಹಂತದ ನೀರು ಬೇಕಾಗಿದೆ. ಆದರೆ ನೀರು ಕೇಳಿದರೆ ಬಿಡುತ್ತಿಲ್ಲ. ಇಂದು ಸಂಜೆಯೊಳಗೆ ನೀರು ಬಿಡದಿದ್ದರೆ ಹಾರನಹಳ್ಳಿ ಹೋಬಳಿಯ ರೈತರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹೋರಾಟ ಸಮಿತಿಯ ಮುಖಂಡರಾದ ಲಕ್ಷ್ಮೀನಾರಾಯಣ್ ಆಗ್ರಹಿಸಿದರು.

ಪಿರಿಯಾಪಟ್ಟಣ ತಾಲೂಕಿನ ಶ್ಯಾನುಭೋಗನಹಳ್ಳಿ ಸಮುದಾಯ ಭವನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೆಳೆ ಫಸಲಿನ ಹಂತಕ್ಕೆ ಬಂದಿದ್ದು, ಈ ಸಮಯದಲ್ಲಿ ನೀರು ಹರಿಸುವುದು ಅತ್ಯವಶ್ಯವಾಗಿದೆ. ಈ ಹಿಂದೆ ನೀರಿನ ವಿಚಾರಕ್ಕೆ ನಡೆದ ಹಾರಂಗಿ ಕಛೇರಿಗೆ ಪಾದಯಾತ್ರೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ಇಲಾಖೆಯ ಅಧೀಕ್ಷಕರಾದ ಚಂದ್ರಕುಮಾರ್ ಅವರು ಡಿಸೆಂಬರ್ ಅಂತ್ಯದವರೆಗೆ ನಿಮ್ಮ ಬೆಳೆಗೆ ತೊಂದರೆಯಾಗದಂತೆ ನೀರು ಬಿಡುತ್ತೇವೆ ಎಂದಿದ್ದರು. ಆದರೆ ಈಗ ದಿಢೀರನೆ 15 ದಿನಗಳ ಹಿಂದೆ ನೀರು ನಿಲ್ಲಿಸಿದ್ದಾರೆ. ಈ ರೀತಿಯಾದರೆ ಈ ಭಾಗದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಆಗ್ರಹಿಸಿದರು.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಮುಖಂಡ ಸುಂದ್ರೇಗೌಡ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿನ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದಿದ್ದ ಶಾಸಕರು ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಬಿಡಿಸಲು ಸಾಧ್ಯವಾಗಿಲ್ಲ. ಇನ್ಯಾವ ರೀತಿ ಕೆರೆ ನೀರು ತುಂಬಿಸುತ್ತಾರೆ ಎಂದು ಉತ್ತರ ಹೇಳಬೇಕು. ಈ ಭಾಗದ ಶಾಸಕರಾದಂತಹ ಕೆ. ವೆಂಕಟೇಶ್, ಹುಣಸೂರು ಮಂಜುನಾಥ್, ಕೆ.ಆರ್. ನಗರ ಸಾ.ರಾ. ಮಹೇಶ್, ಅರಕಲಗೂಡು ಎ.ಮಂಜು ಹಾಗೂ ಹಾರಂಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಬೆಳೆಗಳಿಗೆ ನೀರು ಬಿಡುಗಡೆ ಮಾಡಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಇಲ್ಲದಿದ್ದರೆ ಈ ಭಾಗದ ರೈತರಿಗೆ ಏನೇ ಅನಾಹತವಾದರೂ ಜನಪ್ರತಿನಿಧಿಗಳು ಮತ್ತು ಹಾರಂಗಿ ಇಲಾಖೆಯ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಾಲ ಮನ್ನಾಕ್ಕೆ ಒತ್ತಾಯ:

ಇದೇ ಸಮಯ ಹಾರನಹಳ್ಳಿ ರೈತ ಮುಖಂಡ ಯೋಗೇಶ್‌ಗೌಡ ಅವರು ಮಾತನಾಡಿ, ಇನ್ನು ಕೇವಲ 10 ದಿನ ಮಾತ್ರ ನೀರು ಬಿಡುಗಡೆ ಮಾಡಿದರೆ ಒಂದು ವರ್ಷಕ್ಕೆ ಆಗುವಷ್ಟು ಆಹಾರವನ್ನು ನೀಡಿದಂತಾಗುತ್ತದೆ. ಏತ ನೀರಾವರಿಯಿಂದ ಬರುವ ನೀರನ್ನು ಕೂಡ ನಿಲ್ಲಿಸಿದ್ದಾರೆ. ಈಗ ನೀರು ಹರಿಸಿಸದರೆ ಈ ಭಾಗದ ಫಸಲು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಮ್ಮ ಬೇಡಿಕೆ ಮಂಡಿಸಿದರು. ದಯಮಾಡಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡರುಗಳಾದ ದೇವೆಂದ್ರಪ್ಪ, ಎಸ್.ಕೆ. ಅಶೋಕ್‌ಕುಮಾರ್, ಯಶೋದಾನಂದ, ನಾಗರಾಜಪ್ಪ, ಎಸ್.ಎಂ. ಚಂದ್ರಪ್ಪ, ದಿನೇಶ್‌ಕುಮಾರ್ ಸೇರಿದಂತೆ ಹಾರನಹಳ್ಳಿ ಹೋಬಳಿಯ ರೈತರು ಹಾಜರಿದ್ದರು.

byl-ph-02-web
ನೀರಿಲ್ಲದೆ ಒಣಗಿರುವ ಬೆಳೆ.

Leave a Reply

comments

Related Articles

error: