ಪ್ರಮುಖ ಸುದ್ದಿಮೈಸೂರು

ಸಾಮಾಜಿಕ ಪರಿವರ್ತನೆಗೆ ಶಿಕ್ಷಣ ಪರಿಣಾಮಕಾರಿ ಅಸ್ತ್ರ: ವೈ. ಮರಿಸ್ವಾಮಿ ಅಭಿಮತ

ಸಾಮಾಜಿಕ ಪರಿವರ್ತನೆಗೆ ಶಿಕ್ಷಣ ಪರಿಣಾಮಕಾರಿ ಅಸ್ತ್ರವಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ರಕ್ಷಣೆ, ಸ್ವಾಭಿಮಾನಿ ಬದುಕನ್ನು ಕಟ್ಟಿಕೊಟ್ಟಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ ಅಭಿಪ್ರಾಯಪಟ್ಟರು.

ಸೋಮವಾರ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಂಬಂಧಿತ ಕಾನೂನುಗಳ ಕುರಿತು ಅಧಿಕಾರಿಗಳಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವೈ.ಮರಿಸ್ವಾಮಿ ವಹಿಸಿಸಿದ್ದರು. ಈ ಸಂದರ್ಭ  ಮಾತನಾಡಿದ ಅವರು ಮಂದಿರ, ಮಸೀದಿಗಳಲ್ಲಿ ರಿಂಗಣಿಸುವ ಘಂಟೆಗಳ ನಾದದಿಂದ ದೇಶದ ಅಭಿವೃದ್ಧಿಯಾಗದು. ಶಾಲೆಗಳಲ್ಲಿ ಮೊಳಗುವ ಘಂಟೆಗಳ ನಾದದಿಂದ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಬಲ್ಲುದು. ಮಕ್ಕಳು, ಯುವಕರು ದೇಶದ ದೊಡ್ಡ ಆಸ್ತಿಯಾಗಿದ್ದು ಅವರನ್ನು ರಕ್ಷಿಸುವ, ಸರಿದಾರಿಯಲ್ಲಿ ಮುನ್ನಡೆಸುವ ಕೆಲಸವಾದಾಗ ಮಾತ್ರ ದೇಶದ ಏಳಿಗೆ, ಪ್ರಗತಿ ಸಾಧ್ಯ ಎಂದು ಹೇಳಿದರು.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆಯ ಅರ್ಧದಷ್ಟು ಯುವಕರೇ ಇದ್ದಾರೆ. ನಮ್ಮಲ್ಲಿರುವಷ್ಟು ಯುವ ಸಂಪನ್ಮೂಲ ಬೇರೆ ಯಾವ ದೇಶದಲ್ಲೂ ಇಲ್ಲ. ಆದರೆ  ನಮ್ಮಲ್ಲಿ ಸಿಗುತ್ತಿರುವ ಶಿಕ್ಷಣ, ಆರೋಗ್ಯ, ಆಹಾರದ ಮಟ್ಟ ಯಾವ ರೀತಿಯದ್ದು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದೊದಗಿದೆ. ಇಂದಿನ ಮಕ್ಕಳು ಉತ್ತಮ ಆರೋಗ್ಯ, ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಬಾಲ ಕಾರ್ಮಿಕರಾಗಿ, ಜೀತದಾಳುಗಳಾಗಿ, ಬಾಲ್ಯದಲ್ಲೇ ವಿವಾಹವಾಗಿ ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಭಿಕ್ಷಾಟನೆಗೆ ದೂಡಿ ಅಕ್ರಮವಾಗಿ ಸಂಪಾದನೆ ಮಾಡುವ ಜಾಲಗಳು ಹೆಚ್ಚಾಗುತ್ತಿದ್ದು, ಮಕ್ಕಳ ಹಾಗೂ ಮಹಿಳೆಯರ ಮಾರಾಟ, ಸಾಗಾಣಿಕೆ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕದಿದ್ದರೆ ಭವಿಷ್ಯದ ಭವ್ಯ ಭಾರತ ಕಟ್ಟಲು ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. ಆದರೆ ಅವುಗಳು ಪರಿಣಮಕಾರಿಯಾಗಿ ಜಾರಿಗೊಳ್ಳಲು ವಿಫಲವಾಗುತ್ತಿವೆ. ಕಾಯ್ದೆ ಕಾನೂನುಗಳಿಂದ ಪರಿವರ್ತನೆ ಸಾಧ್ಯವಾಗದಿದ್ದರೂ ಅವುಗಳ ಅನುಷ್ಠಾನದಿಂದ ಬದಲಾವಣೆ ಸಾಧ್ಯವಿದ್ದು ಅಧಿಕಾರಿಗಳು ಶ್ರಮವಹಿಸಬೇಕು. ಅನಿಷ್ಟ ಪದ್ಧತಿಯನ್ನು ತೊಲಗಿಸಿ ದೇಶದ ಆಸ್ತಿಯಾದ ಮಕ್ಕಳನ್ನು ರಕ್ಷಿಸಿ ಆ ಮೂಲಕ ಭವ್ಯಭಾರತ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಬಾಲನ್ಯಾಯ ಕಾಯ್ದೆ-2015, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಹಾಗೂ ಇತರೆ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡುವ ಸಂಬಂಧ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ, ಉಪವಿಭಾಗಾಧಿಕಾರಿ ಸಿ.ಎಲ್. ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಕೆ.ರಾಧ, ರಾಜ್ಯ ದತ್ತು ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಎಂ.ಸಿ. ಶೈಲಜ, ಪೀಪಲ್ಸ್ ಕೋರಂ ನಿರ್ದೇಶಕ ಪಿ.ಪಿ. ಬಾಬುರಾಜ್, ಕಾಣೆಯಾದ ಮಕ್ಕಳ ಬ್ಯೂರೋ ನಿರ್ದೇಶಕ ಮುತ್ತುರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: