ಮೈಸೂರು

ಅಲ್ಪಸಂಖ್ಯಾತರ ಹಕ್ಕೊತ್ತಾಯಕ್ಕಾಗಿ ನ.30ರಂದು ಉಪವಾಸ ಸತ್ಯಾಗ್ರಹ

ಸೋಶಿಯಲ್ ಡಿಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಅಲ್ಪಸಂಖ್ಯಾತರ ಶೈಕ್ಷಣಿಕ ಜಾಗೃತಿ ಹಾಗೂ ಹಕ್ಕೊತ್ತಾಯಕ್ಕಾಗಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಪ್ರೊ. ದೇವನೂರು ಪುಟ್ಟನಂಜಯ್ಯ ತಿಳಿಸಿದರು.

ಅವರು, ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.30ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಅಲ್ಪಸಂಖ್ಯಾತರ ಹಕ್ಕೊತ್ತಾಯ ಹಾಗೂ ರಾಜೇಂದ್ರ ಸಾಚಾರ್ ವರದಿಯ ಯಥಾವತ್ ಅನುಷ್ಠಾನಕ್ಕೆ ಆಗ್ರಹಿಸಿ ಬೆಳಗ್ಗೆ 11 ರಿಂದ ಸಂಜೆ 4 ರ ವರೆಗೆ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸತ್ಯಾಗ್ರಹಕ್ಕೆ ದಲಿತ ಸಂಘಟನೆಗಳು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಮೋರ್ಚಾಗಳು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳಲಿವೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡದೆ ವಂಚಿಸಿದ್ದರು. ಇಂದಿಗೂ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸರ್ಕಾರಿ ನೌಕರಿಯಲ್ಲಿ ಪ್ರಾತಿನಿಧ್ಯ ದೊರೆಯುತ್ತಿಲ್ಲ. ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿದೆ. ಎಲ್ಲ ಪಕ್ಷಗಳೂ ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್‍ ಆಗಿ ಉಪಯೋಗಿಸುತ್ತಿವೆ. ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಸರ್ಕಾರವು ಹತ್ತು ಸಾವಿರ ಕೋಟಿ ರೂಪಾಯಿ ಮೀಸಲಿಡಲು ಆಗ್ರಹಿಸಿದರು.

ಹಾಲೂರು ಮಲ್ಲಣ್ಣ ಮಾತನಾಡಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸಮಾನ ಅವಕಾಶ ನೀಡಬೇಕು. ಸ್ವಾತಂತ್ರ್ಯಪಡೆದು ಎಪ್ಪತ್ತು ವರ್ಷಗಳಾದರೂ ಇಂದಿಗೂ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯವೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಎಫ್. ಖಲೀಮ್, ಜಿಲ್ಲಾ ಕಾರ್ಯದರ್ಶಿ ತಬರ್‍ಜೀ ಸೇಠ್, ಖಜಾಂಚಿ ಮೊಹಮದ್ ಸಫೀವುಲ್ಲಾ ಉಪಸ್ಥಿತರಿದ್ದರು.

Leave a Reply

comments

Related Articles

error: