ಕರ್ನಾಟಕ

ಡಾ.ಕಸ್ತೂರಿ ರಂಗನ್ ವರದಿ ಜಾರಿಯಾದರೆ ಉಗ್ರ ಹೋರಾಟ : ಬಿರುನಾಣಿ ಗ್ರಾಮಸ್ಥರ ಎಚ್ಚರಿಕೆ

ರಾಜ್ಯ(ಮಡಿಕೇರಿ) ಮಾ.24 :- ಡಾ.ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗಾಗಿ ಕೆಲವು ಡೋಂಗಿ ಪರಿಸರವಾದಿಗಳು ಕೇಂದ್ರ ಸರ್ಕಾರದ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆಂದು ಆರೋಪಿಸಿರುವ ಬಿರುನಾಣಿ ಗ್ರಾಮಸ್ಥರು, ವರದಿ ಜಾರಿಗೆ ಮುಂದಾದಲ್ಲಿ ತೀವ್ರ ರೀತಿಯ ಹೋರಾಟ ಎದುರಿಸಬೇಕಾಗತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿ.ಕೆ. ನಾಣಯ್ಯ, ಯಾವುದೇ ಕಾರಣಕ್ಕು ವರದಿ ಜಾರಿಗೆ ಅವಕಾಶ ನೀಡುವುದಿಲ್ಲವೆಂದರು. ಹಾಗೊಂದು ವೇಳೆ ವರದಿ ಜಾರಿಯಾದದ್ದೇ ಆದಲ್ಲಿ, ಕೊಡಗು ಪಂಜಾಬ್ ಆಗಲಿದೆಯೆಂದು ಎಚ್ಚರಿಕೆ ನೀಡಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಕೊಡಗಿನ ವೀರರು ಕಾವೇರಿ ನಾಡನ್ನು ಉಳಿಸಿಕೊಳ್ಳಲು ಕೂಡ ಪ್ರಾಣ ಬಿಡಲು ಸಿದ್ಧವಿರುವುದಾಗಿ ಎಚ್ಚರಿಕೆ ನೀಡಿದರು.

ಬಿರುನಾಣಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಕೆ. ಪೊನ್ನಪ್ಪ ಮಾತನಾಡಿ, ಕೇಂದ್ರ ಪರಿಸರ ಖಾತೆ ಸಚಿವರ ಬಳಿ ಪರಿಸರ ವಾದಿಗಳು ಸುಳ್ಳು ಹೇಳಿ ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.ವರದಿಯನ್ನು ಬೇಕಿದ್ದಲ್ಲಿ ಅರಣ್ಯ ಪ್ರದೇಶದಲ್ಲಿ ಜಾರಿಗೊಳಿಸಿಕೊಳ್ಳಲಿ ಎಂದು ಹೇಳಿದ ಅವರು, ಕುಶಾಲನಗರದವರೆಗೆ ರೈಲು ಮಾರ್ಗ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗಾಗಿ ಹೆದ್ದಾರಿ ಯೋಜನೆ ಜಾರಿಯಾಗಬೇಕೆಂದು ತಿಳಿಸಿದರು.

ಕೊಡಗನ್ನು ಕಾಡಾಗಿ ಪರಿವರ್ತಿಸಲು ಹೊರಟಿರುವ ಡೋಂಗಿ ಪರಿಸರವಾದಿಗಳ ಕ್ರಮ ಖಂಡನೀಯವಾಗಿದ್ದು, ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ಕಾಫಿ ಮಂಡಳಿ ಸದಸ್ಯ ಬಿ.ಎಂ.ರಾಜು ಮಾತನಾಡಿ, ಡೋಂಗಿ ಪರಿಸರವಾದಿಗಳು ವರದಿಯ ಯಥಾವತ್ ಜಾರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ಕೊಡಗಿನ ಎಲ್ಲಾ ಜನತೆ ವರದಿಯ ಜಾರಿಗೆ ಉತ್ಸುಕರಾಗಿದ್ದಾರೆ ಎಂದು ಕೇಂದ್ರದ ಬಳಿ ಪ್ರತಿಬಿಂಬಿಸಲಾಗಿದೆಯೆಂದು ಆರೋಪಿಸಿದರು. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಸರ್ಕಾರ ಅವಕಾಶ ನೀಡಬಾರದೆಂದು ಒತ್ತಾಯಿಸಿದ ಅವರು, ಹೋರಾಟದ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಗಿರೀಶ್ ಪೆಮ್ಮಯ್ಯ ಮಾತನಾಡಿ, ಎ.ಸಿ. ಕಾರಿನಲ್ಲಿ ಕುಳಿತು ಕೊಡಗಿನ ಜನರಿಗೆ ಪರಿಸರವಾದಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಪಾಠ ಹೇಳುವ ಅಗತ್ಯವಿಲ್ಲವೆಂದರು. ಮೂಲ ನಿವಾಸಿಗಳ ಭಾವನೆಯನ್ನು ಕೆಣಕಿ ವರದಿ ಜಾರಿಗೆ ಮುಂದಾದರೆ, ದಂಗೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ಕೊಡಗಿನಲ್ಲಿ ಅರಣ್ಯ ಪ್ರದೇಶ ನಾಶವಾಗಿದೆ ಮತ್ತು ಕಾವೇರಿ ನದಿ ಬರಡಾಗಿದೆಯೆಂದು ಅಪ ಪ್ರಚಾರ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಪರಿಸರವಾದಿಗಳು ಹುನ್ನಾರ ಮಡೆಸುತ್ತಿದ್ದಾರೆ. ಕೊಡಗಿನಲ್ಲಿ ಅರಣ್ಯ ನಾಶವಾಗಿಲ್ಲ ಮತ್ತು ಕಾವೇರಿ ಬರಡಾಗಿಲ್ಲ. ಪರಿಸರವಾದಿಗಳ ಸುಳ್ಳನ್ನು ಯಾರೂ ನಂಬಬಾರದೆಂದು ಒತ್ತಾಯಿಸಿದ ಅವರು, ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಿರುನಾಣಿ ಕೊಡವ ಸಮಾಜದ ಅಧ್ಯಕ್ಷ ಎಂ.ಎಂ. ಪೆಮ್ಮಯ್ಯ ಮಾತನಾಡಿ, ರೈಲು ಮಾರ್ಗ ಮತ್ತು ಹೆದ್ದಾರಿಯ ಅವಶ್ಯಕತೆಯ ಬಗ್ಗೆ ಸಮರ್ಥಿಸಿಕೊಂಡರು.  ಸುದ್ದಿಗೋಷ್ಠಿಯಲ್ಲಿ ತೆರಾಲು ಗ್ರಾಮದ ಬೆಳೆಗಾರರಾದ ಎಂ.ಎಂ. ಭೀಮಯ್ಯ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: