
ಕರ್ನಾಟಕ
ಕೊಡಗು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಲು ಸಾಧ್ಯವೇ ಇಲ್ಲ : ಎಂ.ಬಿ.ಅಭಿಮನ್ಯುಕುಮಾರ್
ರಾಜ್ಯ(ಮಡಿಕೇರಿ)ಮಾ.24:- ಕೊಡಗು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಲು ಸಾಧ್ಯವೇ ಇಲ್ಲ. ಶಿಸ್ತಿನ ಪಕ್ಷ ಕೊಡಗಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು, ಮುಂಬರುವ ಚುನಾವಣೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಪಕ್ಷ ಗೆಲ್ಲಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು.
ಸೋಮವಾರಪೇಟೆ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಹಿಂದೂತ್ವದ ಪ್ರಬಲ ಪ್ರತಿಪಾದಕರಾಗಿ, ದೇಶಭಕ್ತಿಯನ್ನು ಸಾರುವ ಮೂಲಕ ಶ್ರಮಿಸುತ್ತಿರುವ ಸಂಘಪರಿವಾರದವರ ನೆರವಿನಿಂದ ಬಿಜೆಪಿಯ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಶಾಸಕ ಅಪ್ಪಚ್ಚುರಂಜನ್ರವರ ಜನಪ್ರಿಯತೆಯನ್ನು ಸಹಿಸಲಾರದೆ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಪ್ರತಿನಿಧಿಯೊಬ್ಬರು ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಅವರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಶಾಸಕರೇ ದೂರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕುತಂತ್ರಕ್ಕೆ ಬಿಜೆಪಿ ಹೆದರುವುದಿಲ್ಲ, ಮುಂಬರುವ ಚುನಾವಣೆಯಲ್ಲಿ ಮತದಾರ ಸೂಕ್ತ ಉತ್ತರ ನೀಡಲಿದ್ದಾನೆ ಎಂದು ಹೇಳಿದರಲ್ಲದೇ, ಪೊಲೀಸರು ಕೂಡಲೇ ಕುತಂತ್ರದ ರೂವಾರಿಯನ್ನು ಬಂಧಿಸಬೇಕು ಎಂದು ಕರೆ ನೀಡಿದರು. ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ಪ್ರಕಟಿಸಲಿದ್ದಾರೆ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ವಿರೋಧ ಪಕ್ಷದ ಕೆಲವು ಸದಸ್ಯರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಧ್ಯಕ್ಷೆ ವಿಜಯಲಕ್ಷ್ಮಿ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗೂ ಕೀಳು ಮಟ್ಟದ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಅದೇ ಸದಸ್ಯರು ತಮ್ಮ ವೈಯಕ್ತಿಕ ಜೀವನದ ಕುರಿತು ಚಿಂತಿಸುವುದು ಒಳಿತು ಎಂದು ಹೇಳಿದರು. ವಿರೋಧ ಪಕ್ಷದ ಮುಖಂಡ ಆದಂ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು. ಪಟ್ಟಣದ ಅಭಿವೃದ್ಧಿ ಕುರಿತು ಯಾವುದೇ ಸಭೆಗಳಲ್ಲಿ ಚರ್ಚೆ ಮಾಡದ ಕೆಲವು ಸದಸ್ಯರು ಅಧ್ಯಕ್ಷರ ಕುಟುಂಬದ ವೈಯಕ್ತಿಕ ವಿಚಾರವನ್ನು ಕೆಣಕುತ್ತಿರುವುದು ಎಷ್ಟು ಸರಿ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿ, ಪ್ರಾಮಾಣಿಕವಾಗಿ, ಭೃಷ್ಟಾಚಾರವನ್ನು ಹತ್ತಿಕ್ಕಲು ಮುಂದಾಗಿರುವುದೇ ನನಗೆ ಮುಳುವಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದ ಕುರಿತು ಸಲಹೆ ನೀಡದ ಕಾಂಗ್ರೆಸ್ ಸದ್ಯರುಗಳಾದ ಆದಂ ಮತ್ತು ಶೀಲಾ ಡಿಸೋಜಾ ಅವರು, ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದ್ದರಿಂದ ಹತಾಶೆಗೊಂಡು ತಮ್ಮ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ನೋವುಂಟುಮಾಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರ ಅಧ್ಯಕ್ಷ ಎಸ್.ಆರ್.ಸೋಮೇಶ್, ತಾಲೂಕು ಶಿಕ್ಷಣ ಪ್ರಕೋಷ್ಠದ ಅಧ್ಯಕ್ಷ ಜೆ.ಸಿ.ಶೇಖರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)