ಕರ್ನಾಟಕಪ್ರಮುಖ ಸುದ್ದಿ

ದೌರ್ಜನ್ಯ, ಶೋಷಣೆ, ಅತ್ಯಾಚಾರ ನಿಯಂತ್ರಣಕ್ಕೆ ರಾಷ್ಟ್ರೀಯ ನೀತಿ: ಉಗ್ರಪ್ಪ ಸಮಿತಿ ಸಲಹೆ

ಬೆಂಗಳೂರು (ಮಾ.23): ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರಾಷ್ಟ್ರೀಯ ನೀತಿಯನ್ನು ರೂಪಿಸುವುದು ಅಗತ್ಯವಾಗಿದೆ. ಈ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಶಾಸಕ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯು ಸಲಹೆ ನೀಡಿದೆ.

ಸಮಿತಿಯ ಅಂತಿಮ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ವಿ.ಎಸ್. ಉಗ್ರಪ್ಪ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಎಲ್ಲ ರಾಜ್ಯಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿದ್ದು, ಹಲವು ಕಾಯ್ದೆ ಕಾನೂನುಗಳಿಗೆ ತಿದ್ದುಪಡಿ ಅಗತ್ಯವಿರುವುದರಿಂದ ರಾಷ್ಟ್ರೀಯ ನೀತಿ ರೂಪಿಸುವುದು ಅಗತ್ಯವೆಂದು ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

2014ರ ಆಗಸ್ಟ್ 30ರಂದು ಎಂ.ಸಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಅವರು 2015ರ ಮಾರ್ಚ್ 11 ರಂದು ಕಾರಣಾಂತರಗಳಿಂದ ರಾಜೀನಾಮೆ ನೀಡಿದರು. ಈ ಅವಧಿಯಲ್ಲಿ ಅವರು ಬೆಂಗಳೂರಿನಲ್ಲಿ 35 ಸಭೆಗಳು ಹಾಗೂ ಹೊರಗೆ 4 ಸಭೆಗಳನ್ನು ನಡೆಸಿದ್ದರು. ನಂತರ ತಾವು ಸಮಿತಿಯ ಅಧ್ಯಕ್ಷರಾದ ಮೇಲೆ ಬೆಂಗಳೂರಿನಲ್ಲಿ ಹಾಗೂ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಇಲಾಖಾವಾರು ಪರಿಶೀಲನೆ ನಡೆಸಲಾಗಿದೆ. 2015 ರ ಡಿಸೆಂಬರ್ 30 ರಂದು ಮಧ್ಯಂತರ ವರದಿಯನ್ನು ಸಹ ಸಮಿತಿಯು ಸಲ್ಲಿಸಿದ್ದು, ಅದರಲ್ಲಿ 17 ಶಿಫಾರಸುಗಳನ್ನು ಮಾಡಲಾಗಿದೆ ಎಂದು ಉಗ್ರಪ್ಪ ಅವರು ಮಾಹಿತಿ ನೀಡಿದರು.

ಸಮಿತಿಯ ಅಂತಿಮ ವರದಿಯು ಸುಮಾರು 6 ಸಾವಿರಕ್ಕೂ ಹೆಚ್ಚು ಪುಟಗಳಷ್ಟಿದ್ದು, 135 ಶಿಫಾರಸುಗಳನ್ನು ಒಳಗೊಂಡಿದೆ. ಜೊತೆಗೆ ಜಿಲ್ಲೆಗಳಲ್ಲಿ ನಡೆಸಿದ ಸಭೆಗಳ ನಡಾವಳಿಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ಪ್ರಕರಣಗಳ ಅಂಕಿಅಂಶಗಳನ್ನೂ ಸಹ ಈ ವರದಿ ಒಳಗೊಂಡಿದೆ ಎಂದು ತಿಳಿಸಿದರು.

ವರದಿಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ, ದೂರು ಸ್ವೀಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ ಕುರಿತು ಶಿಫಾರಸುಗಳನ್ನು ಮಾಡಲಾಗಿದೆ. ಪ್ರಕರಣ ದಾಖಲಾದ ನಿಗದಿತ ಅವಧಿಯೊಳಗೆ ತನಿಖೆ, ವಿಚಾರಣೆಗಳು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೊಣೆಗಾರಿಕೆ ವಹಿಸುವ ಕುರಿತು, ಸಂತ್ರಸ್ತರಿಗೆ ಪರಿಹಾರವನ್ನು ನಗದು ರೂಪದಲ್ಲಿ ಮಾತ್ರವಲ್ಲ, ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೊಗಕ್ಕೆ ನೆರವು ನೀಡುವ ಮೂಲಕವೂ ನೀಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಪ್ರಸ್ತುತ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ಶೇ. 5ಕ್ಕಿಂತಲೂ ಕಡಿಮೆ ಇದ್ದು, ಶಿಕ್ಷೆಯ ಪ್ರಮಾಣ ಕನಿಷ್ಠ ಶೇ. 50ಕ್ಕಿಂತ ಹೆಚ್ಚಿರುವಂತೆ ಕ್ರಮ ಜರುಗಿಸಲು ಹಾಗೂ ಇದರ ಪೂರ್ಣ ಜವಾಬ್ದಾರಿಯನ್ನು ಎಸ್‍ಪಿ/ ಡಿಸಿಪಿ ಹಾಗೂ ವಿಚಾರಣಾಧಿಕಾರಿಗಳನ್ನು ಹೊಣೆಗಾರರಾಗಿಸಿ ಕಾನೂನಿನಲ್ಲಿ ಬದಲಾವಣೆ ತರಬೇಕು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್‍ಗಳಿಗೆ ಲಿಂಗ ಸಂವೇದನಾ ತರಬೇತಿ ಶಿಬಿರಗಳನ್ನು ಕಡ್ಡಾಯಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಹಾಜರಿದ್ದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಮಿತಿಯು ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸಮಿತಿಯ ಶಿಫಾರಸುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಮಿತಿಯು ವಸ್ತುಸ್ಥಿತಿಯ ಅಧ್ಯಯನಕ್ಕಾಗಿ ಪಟ್ಟಿರುವ ಪರಿಶ್ರಮದ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.(ಎನ್.ಬಿ)

Leave a Reply

comments

Related Articles

error: