ದೇಶ

ರಾಜೀವ್‍ ಗಾಂಧಿ ಮಾನವಸೇವಾ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು (ಮಾ.24): ಭಾರತ ಸರ್ಕಾರವು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್‍ಗಾಂಧಿ ಮಾನವಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿ ಗೌರವಿಸುತ್ತದೆ.

ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು ರೂ.1.00 ಲಕ್ಷ ನಗದು ಬಹುಮಾನ, ಬೆಳ್ಳಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಗಾಗಿ ಆಯ್ಕೆ ಮಾಡುವ 3 ವ್ಯಕ್ತಿಗಳು ಮಕ್ಕಳ ಶ್ರೇಯೋಭಿವೃದ್ಧಿಗಾಗಿ 10 ವರ್ಷಗಳಿಗೂ ಮೇಲ್ಪಟ್ಟು ಕಾರ್ಯವನ್ನು ನಿರ್ವಹಿಸಿರಬೇಕು. ಸಂಘ-ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಇರುವ ಒಂದೇ ಮಾನದಂಡ-ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.

ಅದೇ ರೀತಿಯಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಉತ್ತಮ ಸೇವೆ ಸಲ್ಲಿಸಿದ 3 ವ್ಯಕ್ತಿಗಳು ಹಾಗೂ 5 ಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿರುತ್ತದೆ. ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು ರೂ.1.00 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಪ್ರತಿ ಸಂಸ್ಥೆಗೆ ನೀಡುವ ಪ್ರಶಸ್ತಿಯು ರೂ.3.00 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಸಂಘ-ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಇರುವ ಒಂದೇ ಮಾನದಂಡ-ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಪ್ರಶಸ್ತಿಗಳಿಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.

2018ನೇ ಸಾಲಿಗೆ ರಾಜೀವ್‍ಗಾಂಧಿ ಮಾನವಸೇವಾ ಪ್ರಶಸ್ತಿಗಾಗಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಕಛೇರಿಯಿಂದ ಪಡೆದು, ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ಸಲ್ಲಿಸತಕ್ಕದ್ದು.

ರಾಜೀವ್‍ಗಾಂಧಿ ಮಾನವಸೇವಾ ಪ್ರಶಸ್ತಿಗಾಗಿ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡುವ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿಗಳನ್ನು ದಿನಾಂಕ:11.05.2018 ರೊಳಗೆ ಸಂಬಂಧಪಟ್ಟ ಉಪ ನಿರ್ದೇಶಕರಿಗೆ ಸಲ್ಲಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. (ಎನ್.ಬಿ)

Leave a Reply

comments

Related Articles

error: