ಮೈಸೂರು

ಜೆ ಡಿ ಎಸ್ ಒಂದು ಅವಕಾಶವಾದಿ ಪಕ್ಷ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು,ಮಾ.26 :- ಜೆ ಡಿ ಎಸ್ ಒಂದು ಅವಕಾಶವಾದಿ ಪಕ್ಷ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದ ಎದುರಿಂದು ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಹೆಚ್ ಡಿ ದೇವೇಗೌಡ ಏನಂತ ಹೇಳಿದ್ದರು, ನನ್ನ ಶವದ ಮೇಲೆ ಸರ್ಕಾರ ರಚನೆ ಮಾಡಿ ಅಂದಿದ್ದರು. ಈಗ ಏನು ಮಾಡುತ್ತಿದ್ದಾರೆ. ಇಪ್ಪತ್ತು ತಿಂಗಳು ಅಧಿಕಾರ ಅನುಭವಿಸಿದ ಬಳಿಕ ನನ್ನ ಮಗ ಪಕ್ಷ ಉಳಿಸುವ ಕೆಲಸ ಮಾಡಿದ್ದಾನೆ ಎಂದು ಅವರೇ ಹೇಳಿಕೆ ನೀಡಿದ್ದರು, ಈಗ ಮತ್ತೆ  ಬಿಜೆಪಿ  ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಮಾವೇಶ ಯಶಸ್ವಿಯಾದ ಖುಷಿಯನ್ನು ವ್ಯಕ್ತಪಡಿಸಿದ ಅವರು ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದ ಶಿಫಾರಸು ಸಭೆ ನಡೆಸುತ್ತೇವೆ. ಅಂತಿಮವಾಗಿ ಹೈ ಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಪಕ್ಷ ಜ್ಯಾತ್ಯಾತೀತ ಪಕ್ಷವಾಗಿ ಉಳಿದಿಲ್ಲ. ಈ ಹಿಂದೆ ಬಿಜೆಪಿ ಜೊತೆ ಕೈ ಜೋಡಿಸಿ ಸರ್ಕಾರ ನಡೆಸಿದ್ದಾರೆ. ಈ ಬಾರಿಯೂ ಬಿಜೆಪಿ ಜೊತೆ ಕೈ ಜೋಡಿಸ್ತಾರೆ ಎಂದರು. ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿ ಕೊಂಡ ಅವರು ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ, ಜೆಡಿಎಸ್ ಅವಕಾಶವಾದಿ, ಬಿಜೆಪಿ ಕೊಮುವಾದಿ ಎಂದು ಲೇವಡಿ ಮಾಡಿದರು. ರಾಹುಲ್ ಗಾಂಧಿ ಮಲೆನಾಡು ಭಾಗದಲ್ಲಿ ಏಪ್ರಿಲ್ ಮೊದಲನೇ ವಾರ  ಮೂರನೇ ಹಂತದ ಜನಾಶೀರ್ವಾದದ  ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್  6 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಇದೇ ವೇಳೆ ಜನಾರ್ಶೀವಾದ ಸಮಾವೇಶ ಯಶಸ್ವಿ ಹಿನ್ನಲೆಯಲ್ಲಿ  ಸಖತ್ ಜಾಲಿ ಮೂಡ್‌ನಲ್ಲಿರುವ ಮುಖ್ಯಮಂತ್ರಿ  ಸಿದ್ದರಾಮಯ್ಯ ಖುದ್ದಾಗಿ ಸಾರ್ವಜನಿಕರ ಬಳಿ ತೆರಳಿ ಅಹವಾಲು ಸ್ವೀಕರಿಸಿದರು. ಗ್ರಾಮದೇವತೆ ಮಾರಮ್ಮ ಹಬ್ಬಕ್ಕೆ ಮುಖ್ಯಮಂತ್ರಿಗಳನ್ನು ಕೆಲ ಗ್ರಾಮಸ್ಥರು ಆಹ್ವಾನಿಸಿದರು. ಹಬ್ಬಕ್ಕೆ ಮರಿ ಹೊಡಿತೀರಾ ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದ ಅವರು ಗ್ರಾಂಸ್ಥರು ಹೌದು ಎಂದಿದ್ದಕ್ಕೆ ಸರಿ ನನ್ನ ಮಗ ಯತೀಂದ್ರ ಬರುತ್ತಾನೆ ಹೋಗಿ ಎಂದು ಖುಷಿಯಾಗಿಯೇ ಉತ್ತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: