
ದೇಶ
ಮೂರು ದಿನದಲ್ಲಿ 5 ಎನ್ಕೌಂಟರ್, ಇಬ್ಬರು ರೌಡಿಶೀಟರ್ ಗಳ ಹತ್ಯೆ
ಲಕ್ನೋ,ಮಾ.26: ಕಳೆದ ಮೂರು ದಿನಗಳಲ್ಲಿ ಉತ್ತರ ಪ್ರದೇಶ ಪೊಲೀಸರು 5 ಎನ್ಕೌಂಟರ್ ಹಾಗೂ ಇಬ್ಬರು ರೌಡಿಶೀಟರ್ ಗಳನ್ನು ಹತ್ಯೆ ಮಾಡಿರುವ ಘಟನೆ ನೋಯ್ಡಾದ ಎನ್ಸಿಆರ್ ಘಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ.
ಎನ್ಕೌಂಟರ್ ನಲ್ಲಿ ರೌಡಿಶೀಟರ್ ಶರವಣ್ ಚೌದರಿ ಮೃತಪಟ್ಟಿದ್ದಾನೆ. ಶರವಣ್ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಈತ ದೆಹಲಿ ಹಾಗೂ ನೋಯ್ಡಾದಲ್ಲಿ ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಮತ್ತೊಂದು ಎನ್ಕೌಂಟರ್ ನಲ್ಲಿ ಪೊಲೀಸ್ ಹಾಗೂ ಆರೋಪಿಯ ನಡುವೆ ಗುಂಡಿನ ಚಕಾಮಕಿ ನಡೆದಿದ್ದು, ಅಶನ್ ಎಂಬ ಆರೋಪಿಯನ್ನು ಹತ್ಯೆ ಮಾಡಲಾಗಿದೆ. ಈತನ ವಿರುದ್ಧ ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು. ಭಾನುವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಮಾಹಿತಿ ಪಡೆದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ರವಾನಿಸಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿ ದಾಳಿ ನಡೆಸಿದ ವೇಳೆ ಆರೋಪಿಗಳು ಬಲಿಯಾಗಿದ್ದಾನೆ. ಆರೋಪಿಗಳಿಂದ ದರೋಡೆ ಮಾಡಲಾಗಿದ್ದ ಹಣ ಹಾಗೂ 9ಎಂಎಂ ಹ್ಯಾಂಡ್ ಗನ್ ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಎನ್ಕೌಂಟರ್ ಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ನೀತಿಗಳನ್ನು ಪ್ರತಿ ಪಕ್ಷಗಳು ಟೀಕಿಸುತ್ತಿದ್ದು, `ಎನ್ಕೌಂಟರ್ ರಾಜ್’ ಎಂದು ಕಿಡಿಕಾರಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರೌಡಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಪರಮಾಧಿಕಾರವನ್ನು ನೀಡಿದ್ದಾರೆ. (ವರದಿ: ಪಿ.ಎಸ್ )