ಮೈಸೂರು

ಮೈಸೂರು ವಿವಿ ಕ್ಯಾಂಪಸ್ ಒಳಗಡೆ ಇರುವ ಮರಕ್ಕೆ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಮೈಸೂರು,ಮಾ.27:- ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ಕೆಲಸ ಮಾಡಿಕೊಂಡಿರುತ್ತಿದ್ದ ವ್ಯಕ್ತಿಯೋರ್ವ ಕ್ಯಾಂಪಸ್ ಒಳಗಡೆ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಪಡುವಾರಹಳ್ಳಿ ನಿವಾಸಿ ಮಂಜು(37) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮನೆಯಲ್ಲಿ ಹಸುವಿನ ಹಾಲನ್ನು ಕರೆದಿಟ್ಟು ಹೊರಗೋಗಿ ಬರುತ್ತೇನೆ ಎಂದು ಹೇಳಿ 6ಗಂಟೆಯ ಸುಮಾರಿಗೆ ಬಂದಿದ್ದಾರೆ. ಬಂದವರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗಡೆ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಇವರ ಜೊತೆ ತೋಟಗಾರಿಕೆ ಕೆಲಸ ಮಾಡುವವರು ಸ್ಥಳಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅವರು ಕೂಡಲೇ ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಇನ್ಸಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ ವಿವಾಹವಾಗಿ 7ವರ್ಷವಾಗಿದ್ದು, ಒಂದು ಹೆಣ್ಣು ಮಗು ಕೂಡ ಇದೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: