ಕರ್ನಾಟಕಪ್ರಮುಖ ಸುದ್ದಿ

ಡಾ.ಬಾಬು ಜಗಜೀವನ್ ರಾಮ್, ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ ಸೂಚನೆ

ಮಂಡ್ಯ (ಮಾ.27): ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನ್ ರಾಮ್ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ತಿರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಜಯಂತಿ ಆಚರಣೆ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರು ಮಾತನಾಡಿ ಡಾ. ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗವಿರುವ ಕಾವೇರಿ ಉದ್ಯಾನವನ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮ ಸಂಬಂಧ ನೇಮಕವಾಗಿರುವ ಸಮಿತಿಗಳು ಕಾರ್ಯನಿರ್ವಹಿಸಿ ನೀಡಲಾಗಿರುವ ಜವಾಬ್ದಾರಿಯನ್ನು ಪೂರೈಸುವಂತೆ ತಿಳಿಸಿದರು.

ಮಹಾನ್ ನಾಯಕರ ಭಾವಚಿತ್ರ ಮೆರವಣಿಗೆಯು ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದಿಂದ ಆರಂಭವಾಗಲಿದೆ. ಇದಕ್ಕೆ ಕಲಾತಂಡಗಳನ್ನು ನಿಯೋಜಿಸಿ ಮೆರಗು ತರಬೇಕು. ಮೆರವಣಿಗೆಗೆ ಅಗತ್ಯವಿರುವ ಸಿದ್ಧತೆ ವ್ಯವಸ್ಥೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಅವರು ಸೂಚನೆ ನೀಡಿದರು.

ಕಾರ್ಯಕ್ರಮಗಳಿಗೆ ಅಗತ್ಯವಿರುವ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ವಿತರಣೆ ಸೇರಿದಂತೆ ಇತರೆ ಕೆಲಸದತ್ತ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ನಿರ್ದೇಶನ ನೀಡಿದರು.

ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶ ಹಾಗೂ ವಿಶ್ವಕಂಡ ಮಹಾನ್ ನಾಯಕರು. ಇವರುಗಳ ಸಾಧನೆ, ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವಂತಹ ಕೆಲಸವಾಗಬೇಕು. ಜಿಲ್ಲಾಧಿಕಾರಿಯವರ ಕಚೇರಿ ಕಟ್ಟಡ ಸೇರಿದಂತೆ ಮಂಡ್ಯ ನಗರದ ಮುಖ್ಯ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಆಟೋ ಪ್ರಚಾರ ಹಮ್ಮಿಕೊಳ್ಳಬೇಕು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬ್ಯಾನರ್‍ಗಳನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಮುಖಂಡರುಗಳು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಾಲತಿ, ಮುಖಂಡರಗಳಾದ ವೆಂಕಟಗಿರಿಯಯ್ಯ, ಎಂ.ಬಿ.ಶ್ರೀನಿವಾಸ್, ಪುಟ್ಟಂಕ್ಕಯ್ಯ, ಸಂತೋಪ್, ರಾಮಯ್ಯ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.(ಎನ್.ಬಿ)

Leave a Reply

comments

Related Articles

error: