
ಮೈಸೂರು
ಜಾಗತಿಕ ಸಮಾಜಕಾರ್ಯ ದಿನದ ಜಾಥಾ
ಮೈಸೂರು,ಮಾ.27:- ಅಂತರರಾಷ್ಟ್ರೀಯ ಸಮಾಜಕಾರ್ಯ ಒಕ್ಕೂಟ (IFSW) ದ ತೀರ್ಮಾನದಂತೆ ಜಾಗತಿಕ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಬಿ.ಎನ್ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ವತಿಯಿಂದಲೂ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮಾರ್ಚ್ ತಿಂಗಳಿನ ಯಾವುದೇ ದಿನದಲ್ಲೂ ಸಹ ಈ ಕಾರ್ಯಕ್ರಮವನ್ನು ಆಚರಿಸಬಹುದು. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಆಯ್ಕೆ ಮಾಡಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ಸದರಿ ವರ್ಷದ ವಿಷಯ ‘ಸಮುದಾಯ ಮತ್ತು ಪರಿಸರಾತ್ಮಕ ಸುಸ್ಥಿರತಾ ಅಭಿವೃದ್ಧಿ’ ಕುರಿತು ನಡೆಸಲಾಯಿತು. ವಿಶ್ವದಾದ್ಯಂತ ಸಮಾಜಕಾರ್ಯ ವೃತ್ತಿಯನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗುವುದರಿಂದ ಜನರ ದೃಷ್ಟಿಕೋನವು ವಿವಿಧ ಬಗೆಯಿಂದ ಕೂಡಿದೆ. ಜನರಿಗೆ ವೃತ್ತಿಯ ಬಗ್ಗೆ ಅರಿವು ಮೂಡಿಸಲು ಸಮಾಜಕಾರ್ಯಕರ್ತರು ಕೆಲಸ ನಿರ್ವಹಿಸುವ ಸ್ಥಳ, ಸಮುದಾಯ ಮತ್ತು ಸಮಾಜಕ್ಕೆ ವೃತ್ತಿಯ ಬಗ್ಗೆ ತಿಳಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಪ್ರಾಂಶುಪಾಲ ಎಂ. ಮಹದೇವಪ್ಪ ತಿಳಿಸಿದರು.
ಮೈಸೂರಿನ ಸಾತಗಳ್ಳಿ ಬಳಿ ಇರುವ ಭಾರತ್ ನಗರದಲ್ಲಿನ ಸಮುದಾಯದಲ್ಲಿಂದು ನಡೆದ ಜಾಥಾ ಕಾರ್ಯಕ್ರಮಕ್ಕೆ ಪ್ರಾಂಶುಪಾಲರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ದೇಶ ಸ್ವಚ್ಛತೆ, ಆರೋಗ್ಯ, ಜಾಗತಿಕ ತಾಪಮಾನ, ಸಮುದಾಯ ಮತ್ತು ಪರಿಸರ ರಕ್ಷಣೆಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಪಿ. ಸೋಮಶೇಖರ್ ಮತ್ತು ಇತರೆ ಅಧ್ಯಾಪಕರುಗಳು ಪಾಲ್ಗೊಂಡಿದ್ದರು. ಸಮಾಜಕಾರ್ಯ ವಿಭಾಗದ 57 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿ ಪರಿಸರ ಮತ್ತು ಸಮುದಾಯ ಸಂರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗಿ ಸಮುದಾಯದ ಜನರಿಗೆ ಅರಿವು ಮೂಡಿಸಿದರು. (ಜಿ.ಕೆ.ಎಸ್.ಎಚ್)