ದೇಶಪ್ರಮುಖ ಸುದ್ದಿವಿದೇಶ

ಪಾಕಿಸ್ತಾನ ಪ್ರೀತಿಸುವವರಿಗೆ ಶಿಕ್ಷೆ ಕಾದಿದೆ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಎಚ್ಚರಿಕೆ

ಢಾಕಾ(ಮಾ.27): ಪಾಕಿಸ್ತಾನವನ್ನು ಪ್ರೀತಿಸುವವರಿಗೆ ನಿಶ್ಚಿತವಾಗಿ ಶಿಕ್ಷೆಯಾಗಲಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಎಚ್ಚರಿಸಿದ್ದಾರೆ.

ರಾಜಧಾನಿ ಢಾಕಾದಲ್ಲಿ ಆಡಳಿತಾ ರೂಢ ಅವಾಮಿ ಲೀಗ್ ಪಕ್ಷವು ಬಂಗಬಂಧು ಭಾನುವಾರ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಆಯೋಜಿಸಿದ್ದ ಬಾಂಗ್ಲಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೇಖ್ ಹಸೀನಾ ಅವರು, ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು ಪತ್ತೆ ಮಾಡಿ ಖಂಡಿತಾ ಶಿಕ್ಷಿಸಲಾಗುವುದು ಎಂದು ಈ ವೇಳೆ ಹಸೀನಾ ನುಡಿದಿದ್ದಾರೆ.

1971ರ ಬಾಂಗ್ಲಾ ವಿಮೋಚನೆ ಸಮಯದಲ್ಲಿ ಪಾಕಿಸ್ತಾನವು ನಮ್ಮ ನಾಡಿನಲ್ಲಿ ನಡೆಸಿದ ನರಮೇಧವನ್ನು ಮರೆಯುವಂತಿಲ್ಲ. ಲಕ್ಷಾಂತರ ಅಮಾಯಕರನ್ನು ಕೊಂದು ನಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಕೊಂದು ಹಾಕಲಾಗಿತ್ತು. ಆ ದೃಶ್ಯಗಳು ಇನ್ನೂ ನಮ್ಮ ಕಣ್ಣ ಮುಂದಿವೆ. ಹೀಗಾಗಿ ದೇಶದಲ್ಲಿರುವ ಪಾಕಿಸ್ತಾನಿಪ್ರಿಯರನ್ನು ಗುರುತಿಸಲು ಬಾಂಗ್ಲಾದೇಶದ ದೇಶಪ್ರೇಮಿ ಪ್ರಜೆಗಳು ಸರ್ಕಾರಕ್ಕೆ ನೆರವು ನೀಡಬೇಕು. ಇಲ್ಲವಾದಲ್ಲಿ ನಮ್ಮ ನೆಲದಲ್ಲಿ ನಮ್ಮ ಅಸ್ಥಿತ್ವಕ್ಕೆ ಧಕ್ಕೆ ತರಲು ಇಂತಹ ವ್ಯಕ್ತಿಗಳು ಹವಣಿಸುತ್ತಿರುತ್ತಾರೆ ಎಂದು ಹಸೀನಾ ಅವರು ಕಿವಿಮಾತು ಹೇಳಿದ್ದಾರೆ.

1975ರಲ್ಲಿ ಹತ್ಯೆಗೀಡಾದ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ನೆನಪಿಸಿಕೊಂಡ ಶೇಖ್ ಹಸೀನಾ ಅವರು ಭಾವುಕರಾದರು. ಇದೇ ವೇಳೆ ವಿಪಕ್ಷದಲ್ಲಿರುವ ಕೆಲವು ನಾಯಕರನ್ನು “ಪಾಕಿಸ್ತಾನಿ ಪ್ರಿಯರು” ಎಂದು ಬೊಟ್ಟುಮಾಡಿದ ಹಸೀನಾ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖ್ಯಸ್ಥ ಜಿಯಾ ಉರ್ ರೆಹಮಾನ್ ಮತ್ತು ಅವರ ಪತ್ನಿ ಬೇಗಂ ಖಲೀದಾ ಜಿಯಾ ಅವರೂ ಕೂಡ ಪಾಕಿಸ್ತಾನನ್ನು ಪ್ರೀತಿಸುತ್ತಾರೆ ಎಂದು ನೇರವಾಗಿ ಹೆಸರು ಉಲ್ಲೇಖಿಸಿ ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು.

1975ರ ಬಳಿಕ ಬಾಂಗ್ಲಾದೇಶದಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. 75ರ ಬಳಿಕ ಬಾಂಗ್ಲಾದೇಶದ ಯಾವೊಬ್ಬ ಪ್ರಜೆಯೂ ಕೂಡ ಪಾಕಿಸ್ತಾನಿ ಸೇನೆಯನ್ನು ಬಾಂಗ್ಲಾ ಸೇನೆ ಎಂದು ಕರೆಯುತ್ತಿರಲಿಲ್ಲ. ಬದಲಿಗೆ ಪಾಕ್ ಆಕ್ರಮಿತ ಸೈನಿಕರು ಎಂದು ಕರೆಯುತ್ತಿದ್ದರು. 1975ರಲ್ಲಿ ಅಧಿಕಾರಕ್ಕೆ ಬಂದವರು ಪ್ರಜೆಗಳ ಹಣೆಬರಹ ಬದಲಿಸಲು ಬಂದವಾರಾಗಿರಲಿಲ್ಲ. ತಮ್ಮ ಸ್ವಹಿತಾಸಕ್ತಿಗಾಗಿ ರಾಜಕೀಯ ಮಾಡಿದರು. ಬಾಂಗ್ಲಾದೇಶದ ಅಭಿವೃದ್ಧಿ ಅವರಿಗೆ ಬೇಕಿರಲಿಲ್ಲ ಎಂದು ಹಸೀನಾ ತೀವ್ರ ಅಸಮಾಧಾನ ಹೊರಹಾಕಿದರು. (ಎನ್.ಬಿ)

Leave a Reply

comments

Related Articles

error: