ಮನರಂಜನೆಮೈಸೂರು

ಡಿ.3: ಬಹುಮುಖಿ: ಬದುಕಿನೊಂದಿಗೆ ಮುಖಾಮುಖಿ

ಇತಿಹಾಸ, ಕಥನ, ನೆನಪು, ವಾಸ್ತವ, ಭ್ರಮೆ ಮತ್ತು ಭವಿಷ್ಯದ ಕನಸುಗಳ ನಡುವೆ ಅಸ್ಪಷ್ಟ ಸಂಬಂಧಗಳನ್ನು ನಿರ್ಮಿಸುವ ಬಹುಮುಖಿ. ವಿವೇಕ್ ಶಾನಭಾಗ ಅವರ ರಚನೆಯ ಈ ಬಹುಮುಖಿ ನಾಟಕ ನಟನದ ರಂಗ ಶಿಕ್ಷಕ ಮೇಘ ಸಮೀರ ಅವರ ನಿರ್ದೇಶನದಲ್ಲಿ ಡಿಸೆಂಬರ್ 3ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಬಹುಮುಖಿ ಹೆಸರೇ ಸೂಚಿಸುವಂತೆ ಬದುಕಿನ ಹಲವು ಮುಖಗಳನ್ನು ತೆರೆದಿಡಲಿದೆ. ಇದು ಆಧುನಿಕ ಪುರಾಣ ಕಥನ. ಅಂದರೆ ಈ ಶತಮಾನದ ಕತೆ. ಸದಾ ಸಮಯದೊಂದಿಗೆ ಸೆಣೆಸಾಡುತ್ತಾ ವೇಗವಾಗಿ ಓಡುತ್ತಿರುವ  ಅಂತೆಯೇ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಪೈಪೋಟಿಗಿಳಿದ ಮಾಧ್ಯಮಗಳು ಬಯಸುವ ರೋಚಕ ಸುದ್ದಿಯ ಬೆನ್ನುಹತ್ತಿದ ಪತ್ರಕರ್ತನ ಕತೆ. ಸಣ್ಣ ಸಣ್ಣ ಊರುಗಳ ಮಧ್ಯಮ-ಕೆಳ ಮಧ್ಯಮ ಕುಟುಂಬದಿಂದ ಅನೇಕ ಕನಸುಗಳನ್ನು ಹೊತ್ತು ದೊಡ್ಡ ದೊಡ್ಡ ನಗರ ಕೇಂದ್ರಗಳಿಗೆ ಬಂದಿಳಿದು, ಇತ್ತ ನಗರ ಜೀವನಕ್ರಮಕ್ಕೆ ಹೊಂದಿಕೊಳ್ಳಲಾಗದೆ, ಅತ್ತ ಮರಳಿ ಊರಿಗೂ ಹೋಗಲಾರದೆ, ಆದರ್ಶ, ಸಿದ್ಧಾಂತಗಳನ್ನು ಬಿಡಲೂ ಆಗದೆ, ಡಾಂಭಿಕ ಸಮಾಜದ ಭ್ರಷ್ಟತೆಯೊಂದಿಗೆ ಹೊಂದಿಕೊಳ್ಳಲೂ ಆಗದೆ ತೊಳಲಾಡುತ್ತಿರುವ ಮತ್ತು ಅಭದ್ರತೆ, ಗೊಂದಲಗಳಲ್ಲೇ ಬದುಕುತ್ತಿರುವ ಎಲ್ಲಾ ಯುವಕರ ಕತೆ. ಐಶಾರಾಮಿ ಬದುಕಿನ ಬೆನ್ನು ಹತ್ತಿದ ನಗರದ ಮಧ್ಯಮ-ಮೇಲ್ವರ್ಗದ ಹೆಂಗಸರ ಭಾವನೆಗಳನ್ನು ತನ್ನ ವ್ಯಾಪಾರಕ್ಕಾಗಿ ಬಳಸುತ್ತಾ, ಜನರ ಕಣ್ಣಿಗೆ ಮಣ್ಣೆರಚುವ, ಅಧ್ಯಾತ್ಮದ ಹೆಸರಲ್ಲಿ ದುಡ್ಡು ಸುಲಿಯುವ, ‘ಇಮೋಷನಲ್ ಫಿಟ್‍ನೆಸ್ ಸೆಂಟರ್’ಗಳನ್ನು ನಡೆಸುತ್ತಿರುವ, ಇಡೀ ಸಮಾಜವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಿಸುವ ಪ್ರಭಾವಶಾಲಿ ಜಗದ್ಗುರುಗಳ, ಈ ಯುಗದ ಶ್ರೀಕೃಷ್ಣರ ಕತೆ.

ಹುಸಿ ಮಾನವೀಯತೆಯ ಸೋಗು ಹಾಕಿಕೊಂಡು ಸಮಾಜದಲ್ಲಿ ಅಂತರ್ಜಾತಿ-ಅಂತರ್ಧಮೀಯ ಮದುವೆಯಾಗಿ ಅಸ್ತಿತ್ವಕ್ಕಾಗಿ ಹೆಣಗುತ್ತಾ, ಅಘೋಷಿತ ಬಹಿಷ್ಕಾರಕ್ಕೊಳಗಾಗಿ ನೆಲೆಕಳೆದುಕೊಂಡ ಮುಗ್ಧ ಪ್ರೇಮಿಗಳ ಕತೆ. ಬಹು ಮುಖಗಳನ್ನು ಪಡೆದುಕೊಳ್ಳುತ್ತಾ ಇವತ್ತಿನ ಸಮಕಾಲೀನ ಬದುಕಿನಲ್ಲಿ ಕರಗಿ, ಪ್ರೇಕ್ಷಕನ ಮನಸ್ಸಿನಲ್ಲಿ ಆವಿರ್ಭವಿಸುತ್ತದೆ.

Leave a Reply

comments

Related Articles

error: