ಕರ್ನಾಟಕ

ಏ.3: ಶ್ರೀಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವಕ್ಕೆ ಚಾಲನೆ

ರಾಜ್ಯ(ಮಡಿಕೇರಿ )ಮಾ.27 :-  ನಗರದ ಪ್ರಸಿದ್ಧ ಶ್ರೀಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರೆ ಏ.3ರಿಂದ 7ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರತೀವರ್ಷ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ದೇವರ ಪುನರ್‍ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಮುತ್ತಪ್ಪ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ವರ್ಷವೂ ಐದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವಾರ್ಷಿಕೋತ್ಸವ ಹಾಗೂ ಜಾತ್ರೆ ನಡೆಯಲಿದೆ ಎಂದರು.

ಸಮಿತಿಯ ಖಜಾಂಚಿ ಎನ್.ವಿ.ಉಣ್ಣಿಕೃಷ್ಣನ್ ಮಾತನಾಡಿ, ಏಪ್ರಿಲ್ 3ರ ಪೂರ್ವಾಹ್ನ 6.30ಕ್ಕೆ ಕೇರಳದ ಅಡೂರಿನ ಶ್ರೀ ಮಾಂಗೂರು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಶಕ್ತಿಗಣಪತಿ ದೇವರಿಗೆ 108 ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಅರಂಭವಾಗಲಿದೆ ಎಂದರು. ಅಂದು ಸಂಜೆ 4ಗಂಟೆಗೆ ಧ್ವಜಾರೋಹಣ, 6  ಗಂಟೆಗೆ ದೀಪಾರಾಧನೆ, 7-30ಕ್ಕೆ ವಾಸ್ತು ಪೂಜೆ, ವಾಸ್ತು ಬಲಿ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಏ.4ರ ಬೆಳಗ್ಗೆ 8  ಗಂಟೆಗೆ ಕಲಶ ಪೂಜೆ, 10  ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 1-00 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶ್ರೀ ಭೂತಬಲಿ ಸೇವೆ ಜರುಗಲಿದೆ.

ಏ.5ರಂದು ಬೆಳಗ್ಗೆ 10 ಗಂಟೆಗೆ ಶ್ರೀ ನಾಗದೇವರಿಗೆ ಪ್ರಿಯವಾದ ನೂರುಂಪಾಲುಂ (ನಾಗತಂಬಿಲ) ಸಮರ್ಪಣೆ ನಡೆಯಲಿದ್ದು, ಸಂಜೆ 4-30 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದ,  5-30ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, 7 ಗಂಟೆಗೆ ಮೊದಕಲಶ ಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.

ಏ.6ರಂದು ಸಂಜೆ 5ಗಂಟೆಗೆ  ನಗರದ ಗಾಂಧಿ ಮೈದಾನದಿಂದ  ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಮರಗೋಡು, ಸಂಪಿಗೆ ಕಟ್ಟೆ, ಐಟಿಐ ಜಂಕ್ಷನ್ ಸೇರಿದಂತೆ ನಗರದ ನಾಲ್ಕು ದಿಕ್ಕುಗಳಿಂದ  ಬರುವ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿಯೊಂದಿಗೆ ಕೇರಳದ 50 ಜನರ ಚಿಂಗಾರಿ ಮೇಳ ಚಂಡೆ ವಾದ್ಯ ಹಾಗೂ ಕೇರಳ ಮತ್ತು ಮಂಗಳೂರಿನ ಆಕರ್ಷಕ ಕಲಾತಂಡಗಳು ಮೆರಗು ನೀಡಲಿವೆ. ಈ ಬಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರು ಮತ್ತು ಮಕ್ಕಳಿಗೆ ನಗರದ ಮುಳಿಯ ಜುವೆಲ್ಲರ್ಸ್ ಮತ್ತು ಮಾತಾಜಿ ಗೋಲ್ಡ್ ಪ್ಯಾಲೇಸ್ ವತಿಯಿಂದ ಉಚಿತವಾಗಿ ಲಕ್ಕಿ ಕೂಪನ್‍ಗಳನ್ನು ನೀಡಲಾಗುತ್ತಿದ್ದು, ಅದೃಷ್ಟವಂತ 40 ಮಹಿಳೆಯರು ಮತ್ತು ಮಕ್ಕಳಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಉಣ್ಣಿಕೃಷ್ಣನ್ ತಿಳಿಸಿದರು.

ಸಂಜೆ 4ಗಂಟೆಯಿಂದ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ,  ರಾತ್ರಿ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, 8-30 ಗಂಟೆಗೆ ಶ್ರೀ ಪೊವದಿ ವೆಳ್ಳಾಟಂ, 9-30 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ 12ಗಂಟೆಯಿಂದ  ಶ್ರೀ ಶಿವಭೂತ ತೆರೆ, ಶ್ರೀ ಗುಳಿಗ ದೇವರ ತೆರೆ, ಶ್ರೀ ಕುಟ್ಟಿಚಾತನ್ ದೇವರ ತೆರೆ, ಬೆಳಗಿನ ಜಾವ 3 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, 4  ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, 8  ಗಂಟೆಗೆ ಶ್ರೀ ಪೊವ್ವದಿ ತೆರೆ, 9-30 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ 11-30 ಕ್ಕೆ ಧ್ವಜ ಅವರೋಹಣ ಕಾರ್ಯಕ್ರಮದೊಂದಿಗೆ ಉತ್ಸವ ಮತ್ತು ಜಾತ್ರೆಗೆ ತೆರೆ ಬೀಳಲಿದೆ ಎಂದರು.

ಹರಕೆ ವಿಷ್ಣುಮೂರ್ತಿ ಕೋಲ( ಮೇಲೇರಿ ಇಲ್ಲದ ಅಲಂಕಾರ ವಿಷ್ಣುಮೂರ್ತಿ) ಹಾಗೂ ಮುತ್ತಪ್ಪನ್, ತಿರುವಪ್ಪನ್, ಗುಳಿಗ, ಶಿವಭೂತಂ, ಪೊವ್ವದಿ, ಕುಟ್ಟಿಚಾತನ್ ಸೇರಿದಂತೆ ವಿವಿಧ ಹರಕೆ ಕೋಲಗಳನ್ನು ಮಾಡಿಸುವ ಭಕ್ತಾದಿಗಳು ಏ.4ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಉಣ್ಣಿಕೃಷ್ಣನ್ ಮನವಿ ಮಾಡಿದರು.

ಏ.3ರಂದು ಸಂಜೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಮಕ್ಕಳ ತಜ್ಞ ಡಾ. ಬಿ.ಸಿ.ನವೀನ್‍ಕುಮಾರ್ ಅವರುಗಳು ಭಾಗವಹಿಸಲಿದ್ದು, ಏ.6ರ ಕಲಶ ಮೆರವಣಿಗೆಯನ್ನು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿ.ಎಂ. ವಿಜಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶಾರದಾ ರಾಮನ್ ಅವರು ಮಾತನಾಡಿ, ಏ.6ರಂದು ರಾತ್ರಿ 8.30ರಿಂದ ಮೈಸೂರಿನ ಕಲಾವಿದರಿಂದ ವಾದ್ಯಗೋಷ್ಠಿ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಮುಳಿಯ ಜುವೆಲ್ಲರ್ಸ್ ಅವರಿಂದ ದೇವಾಲಯದ ಬಗೆಗೆ ರಸಪ್ರಶ್ನೆ ಕಾರ್ಯಕ್ರಮವೂ ಜರುಗಲಿದೆ ಎಂದು ಹೇಳಿದರು.

ಅಂದು ಸಂಜೆ ಗಾಂಧಿ ಮೈದಾನದಿಂದ ನಡೆಯುವ ಕಲಶ ಮೆರವಣಿಗೆಯಲ್ಲಿ ಮಹಿಳೆಯರು ದೀಪ, ಕಲಶ, ತಟ್ಟೆಗಳನ್ನು ತಂದಲ್ಲಿ ಉಳಿದ ಸಾಮಾಗ್ರಿಗಳನ್ನು ಮಹಿಳಾ ವೇದಿಕೆ ವತಿಯಿಂದ ನೀಡಲಾಗುವುದಲ್ಲದೆ, ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷರಾದ  ಸುರೇಶ್, ಮಹಿಳಾ ವೇದಿಕೆ ಅಧ್ಯಕ್ಷೆ ಸಂಗೀತಾ ಪ್ರಸನ್ನ ಹಾಗೂ ಖಜಾಂಚಿ ಮಂಜುಳಾ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: