
ಮೈಸೂರು, ಮಧುರೈ, ಆಂಧ್ರದ ಚಿತ್ತೂರು ಮತ್ತು ನೆಲ್ಲೂರು, ಕೇರಳದ ಕೊಲ್ಲಂ ಮತ್ತು ಮಲ್ಲಪುರಮ್ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ಸ್ಪೋಟ ನಡೆಸಿದ್ದ ಶಂಕಿತ ಮೂವರು ಉಗ್ರರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಂಕಿತ ಉಗ್ರರನ್ನು ಮಧುರೈನ ಕರೀಂ, ಅಯೂಬ್ ಮತ್ತು ಅಬ್ಬಾಸ್ ಅಲಿ ಎಂದು ಗುರುತಿಸಲಾಗಿದೆ. ಇವರು ಬೇಸ್ ಮೂವ್ ಮೆಂಟ್ ಎಂಬ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ತನಿಖಾ ದಳ ಹಾಗೂ ತಮಿಳುನಾಡು ಪೊಲೀಸರು ಬಾಂಬ್ ಸ್ಪೋಟ ನಡೆಸಿದ ಶಂಕಿತ ಅಲ್ ಖೈದಾ ಉಗ್ರರನ್ನು ಬಂಧಿಸಿದ್ದಾರೆ. ಎಪ್ರಿಲ್ 7ರಂದು ಚಿತ್ತೂರಿನ ನ್ಯಾಯಾಲಯದಲ್ಲಿ, ಜೂನ್.15ರಂದು ಕೇರಳದ ಕೊಲ್ಲಂ ನ್ಯಾಯಾಲಯದಲ್ಲಿ, ಆಗಸ್ಟ್ 1ರಂದು ಮೈಸೂರು ನ್ಯಾಯಾಲಯದಲ್ಲಿ, ಸೆಪ್ಟೆಂಬರ್ 12ರಂದು ಆಂಧ್ರದ ನೆಲ್ಲೂರು ನ್ಯಾಯಾಲಯದಲ್ಲಿ ಹಾಗೂ ನವೆಂಬರ್ 2ರಂದು ಕೇರಳದ ಮಲ್ಲಪುರಂ ನ್ಯಾಯಾಲಯದಲ್ಲಿ ಲಘು ತೀವ್ರತೆ ಬಾಂಬ್ ಸ್ಪೋಟಗಳು ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.