ದೇಶ

ತಾಜ್ ಮಹಲ್ ವೀಕ್ಷಣೆಗೆ 3 ಗಂಟೆ ಸಮಯ ನಿಗದಿ.!

ನವದೆಹಲಿ,ಮಾ.28-ವಿಶ್ವ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿರುವ ತಾಜ್ ಮಹಲ್ ವೀಕ್ಷಿಸಲು ಪ್ರವಾಸಿಗರಿಗೆ ಮೂರು ಗಂಟೆಗಳ ಸಮಯಾವಕಾಶ ನಿಗದಿಪಡಿಸುವ ಕುರಿತು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ನಿರ್ಧರಿಸಿದೆ.

ಪ್ರವಾಸಿಗರು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ತಾಜ್ ಮಹಲ್ ವೀಕ್ಷಿಸಬೇಕಾದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಎಲ್ಲ ಪ್ರವಾಸಿಗರಿಗೂ ಅನ್ವಯವಾಗುತ್ತದೆ.

ಈ ಕುರಿತು ಎಎಸ್‌ಐ ಸಾರ್ವಜನಿಕ ಸೂಚನೆಯೊಂದನ್ನು ಹೊರಡಿಸಿದೆ. ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಟಿಕೆಟ್‌ಗಳ ಸಮಯ ಪರೀಕ್ಷಿಸಲು ನಮಗೆ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಪ್ರತಿದಿನ 50,000ಕ್ಕೂ ಹೆಚ್ಚು ಪ್ರವಾಸಿಗರು ತಾಜ್ ಮಹಲ್ ವೀಕ್ಷಣೆಗೆ ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಸ್ಮಾರಕ ಜಾಗ ಸೀಮಿತವಾಗಿದ್ದು, ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಲಭ್ಯವಿರುವ ಜಾಗದಲ್ಲಿ ಪ್ರವಾಸಿಗರನ್ನು ನಿಭಾಯಿಸಬೇಕಾಗಿದೆ. ಕೆಲವೊಮ್ಮೆ ಪ್ರವಾಸಿಗರನ್ನು ನಿಯಂತ್ರಿಸಲು ತುಂಬಾ ಕಷ್ಟವಾಗುತ್ತದೆ. ಇದು ನಮಗೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ. ಟಿಕೆಟ್‌ಗಳ ಮೇಲೆ ಸಮಯಾವಕಾಶ ನಿಗದಿಯಿಂದ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ತಾಜ್‌ಮಹಲ್ ವೀಕ್ಷಣೆಗೆ ಪ್ರತಿಯೊಬ್ಬ ಭಾರತೀಯನಿಗೆ ಟಿಕೆಟ್ ಶುಲ್ಕ 40 ರೂ., ಸಾರ್ಕ್ ರಾಷ್ಟ್ರದವರಿಗೆ 530 ರೂ. ಹಾಗೂ ಇತರ ವಿದೇಶಿ ಪ್ರವಾಸಿಗರಿಗೆ 1,000 ರೂ. ನಿಗದಿಪಡಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: